ದುಬೈನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬ ತನ್ನ ಬಾಯಲ್ಲಿ ಅಡಗಿಸಿಕೊಂಡು ತಂದಿದ್ದ ಸುಮಾರು 82 ಗ್ರಾಂ ತೂಕದ ಎರಡು ಚಿನ್ನದ ಕ್ಯಾಪ್ಸೂಲ್‌ಗಳನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ CISF ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಬೆಂಗಳೂರಿಗೆ ಬಂದಿದ್ದ ಮೊಹಮ್ಮದ್ ಸಿರಾಜ್ ಎಂಬ ಪ್ರಯಾಣಿಕನ ಬಳಿ ಸುಮಾರು 82 ಗ್ರಾಂ ತೂಕದ ಎರಡು ಚಿನ್ನದ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ಮೊಹಮ್ಮದ್ ಸಿರಾಜ್, ದುಬೈನಿಂದ IndiGo 6E-1486 ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದ. ಬಳಿಕ ಬೆಳಗ್ಗೆ 9.20ಕ್ಕೆ ಘಾಜಿಯಾಬಾದ್‌ಗೆ ತೆರಳಬೇಕಿತ್ತು ಎನ್ನಲಾಗಿದೆ. ಈ ವೇಳೆ Terminal-1ರಲ್ಲಿ CISF ಸಿಬ್ಬಂದಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದಾಗ ಸಿರಾಜ್ ಅವರ ವರ್ತನೆ ಬಗ್ಗೆ ಅನುಮಾನಗೊಂಡಿದ್ದಾರೆ. ಹೆಚ್ಚಿನ ಪರಿಶೀಲನೆ ನಡೆಸಿದಾಗ ಅವರ ಬಾಯಿಯೊಳಗೆ ಎರಡು ಕ್ಯಾಪ್ಸೂಲ್‌ಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, Body Scanner ತಪಾಸಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಚಿನ್ನವನ್ನು ಕ್ಯಾಪ್ಸೂಲ್ ರೂಪದಲ್ಲಿ ಬಾಯಿಯೊಳಗೆ ಅಡಗಿಸಿಕೊಂಡು ಬಂದಿದ್ದ ಎಂದು ತಿಳಿದುಬಂದಿದೆ. ಪತ್ತೆಯಾದ ಹಳದಿ ಲೋಹದ ಕ್ಯಾಪ್ಸೂಲ್‌ಗಳ ಒಟ್ಟು ತೂಕ ಸುಮಾರು 82 ಗ್ರಾಂ ಎಂದು ಮಾಹಿತಿ ಲಭ್ಯವಾಗಿದೆ.

ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ CISF ಅಧಿಕಾರಿಗಳು ಪ್ರಯಾಣಿಕ ಮೊಹಮ್ಮದ್ ಸಿರಾಜ್ ಅವರನ್ನು ವಶಕ್ಕೆ ಪಡೆದು KIA ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಯಾಣಿಕನ ಬಳಿ ಪತ್ತೆಯಾದ ಚಿನ್ನದ ಮೂಲ, ಅದರ ಮೌಲ್ಯ ಹಾಗೂ Gold Smugglingಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.