ರಾಮನಗರ: ಕಾಂಗ್ರೆಸ್ಗೆ ವಿರುದ್ಧವಾದ ಜನಾದೇಶ ಬಂದ್ರೆ ಅವರಿಗೆ ಎಕ್ಸಿಟ್ ಪೋಲ್ ಅಥವಾ ಇವಿಎಂ ಮೇಲೆ ನಂಬಿಕೆ ಇರಲ್ಲ. ಅವರ ಹೇಳಿಕೆಗಳಿಗೆ ನಾವೇನು ತಲೆ ಕೆಡಿಸಿಕೊಳ್ಳಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.
ಪ್ರಾರಂಭದಲ್ಲೇ ನರೇಂದ್ರ ಮೋದಿ `ಅಪ್ ಕಿ ಬಾರ್ ಚಾರ್ ಸೌ ಪಾರ್’ ಅಂತ ಹೇಳಿದ್ದರು. ಚುನಾವಣೋತ್ತರ ಸಮೀಕ್ಷೆಗಳನ್ನ ನೋಡಿದ್ರೆ ಆ ಘೋಷಣೆಗೆ ಜನ ಸ್ಪಂದಿಸಿದ್ದಾರೆ ಅನ್ನಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಟೆರರಿಸಂ, ನಕ್ಸಲಿಸಂ ಬಂದ್ ಆಗಿದೆ, ಆರ್ಥಿಕತೆ ಗಟ್ಟಿಯಾಗಿದೆ. ಅಭಿವೃದ್ಧಿ ಕೆಲಸಗಳು ಜನರ ಅನುಭವಕ್ಕೆ ಬಂದಿವೆ. ಹಾಗಾಗಿ ಜನ ನರೇಂದ್ರ ಮೋದಿಗೆ ಕಮಿಟ್ ಆಗಿ ವೋಟ್ ಮಾಡಿದ್ದಾರೆ.
2014ರಲ್ಲಿ ಎನ್ಡಿಎ ಪರವಾಗಿ ಎಷ್ಟು ಎಕ್ಸಿಟ್ ಪೋಲ್ ಕೊಟ್ಟಿದ್ದ ವರದಿಗಿಂತ ಹೆಚ್ಚು ಸ್ಥಾನ ಬಂದಿತ್ತು. ಈಗಲೂ ಎಕ್ಸಿಟ್ ಪೋಲ್ ಕೊಟ್ಟಿರೋ ಸಂಖ್ಯೆಗಿಂತ ಬಿಜೆಪಿ 30 ಸ್ಥಾನಗಳು ಹೆಚ್ಚು ಬರಲಿದೆ. 3ನೇ ಬಾರಿಗೆ ನರೇಂದ್ರ ಮೋದಿ ದೇಶದ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗರು ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ನಂಬಿದ್ದರು. ಈಗ ಎಕ್ಸಿಟ್ ಪೋಲ್ ನಂಬಲ್ಲ ಅಂತಾರೆ. ಅವರ ವಿರುದ್ಧವಾದ ಆದೇಶ ಬಂದ್ರೆ ಅವರಿಗೆ ಎಕ್ಸಿಟ್ ಪೋಲ್ ಮೇಲೆ, ಇವಿಎಂ ಮೇಲೆ ನಂಬಿಕೆ ಬರಲ್ಲ. ಹಾಗಾಗಿ ಅವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ ಎಂದರು.

