ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದಲ್ಲಿ ಈಗಾಗಲೇ ಒಬ್ಬ ಆರೋಪಿ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದ ಬೆನ್ನಲ್ಲೇ, ಇದೀಗ ಇನ್ನಿಬ್ಬರು ಆರೋಪಿಗಳೂ ಇದೇ ದಾರಿಯನ್ನು ಹಿಡಿಯಲು ಸಿದ್ಧರಾಗಿದ್ದಾರೆ.
ಪ್ರಕರಣದ 14ನೇ ಆರೋಪಿ ಪ್ರದೋಶ್, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರದೋಶ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ಸಂದರ್ಭದಲ್ಲಿ ಪ್ರದೋಶ್ ಪರ ವಕೀಲರು, ಮೊದಲು ತಮ್ಮ ಕಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ಬಳಿಕ ಈ ಕುರಿತು ಪ್ರಾಸಿಕ್ಯೂಷನ್ ತನ್ನ ನಿಲುವು ತಿಳಿಸಲಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಅರ್ಜಿಯ ವಿಚಾರಣೆ ಇನ್ನೂ ಮುಂದುವರಿದಿದೆ.
ಪ್ರಕರಣದ 10ನೇ ಆರೋಪಿ ವಿನಯ್ ರಾಘವೇಂದ್ರ ಹಾಗೂ 8ನೇ ಆರೋಪಿ ರವಿಶಂಕರ್ ಕೂಡ ತಮ್ಮನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವ ಮಾಹಿತಿ ಲಭ್ಯವಾಗಿದೆ. ಅವರ ಪರ ವಕೀಲರು ಕೂಡ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರದೋಶ್ ಪರ ವಕೀಲರು ತಮ್ಮ ಅರ್ಜಿಯೊಂದಿಗೆ ಇತರ ಆರೋಪಿಗಳ ಮನವಿಯನ್ನು ಸೇರಿಸಬಾರದು ಎಂದು ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಸ್ವಲ್ಪ ಸಮಯ ಮುಂದೂಡಿತು.
ಪ್ರಕರಣದ ತನಿಖೆಯ ಪ್ರಕಾರ, ಆರ್.ಆರ್.ನಗರದಲ್ಲಿರುವ ಸ್ಟೋನಿ ಬ್ರೂಕ್ ಪಬ್ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ವಿನಯ್ ನಟ ದರ್ಶನ್ (Actor Darshan) ಅವರ ಆಪ್ತನಾಗಿದ್ದಾನೆ ಎನ್ನಲಾಗಿದೆ. ಇದೇ ಪಬ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಮಹತ್ವದ ಚರ್ಚೆಗಳು ನಡೆದಿದ್ದವು ಎಂಬ ಆರೋಪವಿದೆ. ಕೊಲೆ ನಡೆದ ದಿನವೂ ಪ್ರದೋಶ್, ದರ್ಶನ್ ಜೊತೆ ಅಲ್ಲಿಂದ ಪಟ್ಟಣಗೆರೆಯ ಶೆಡ್‌ಗೆ ತೆರಳಿದ್ದ ಎಂದು ತನಿಖಾ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಆರೋಪದಂತೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುತ್ತಿದ್ದ ವೇಳೆ ಪ್ರದೋಶ್ ಅಲ್ಲೇ ಇದ್ದನು. ಹಲ್ಲೆ ತೀವ್ರವಾಗುತ್ತಿದ್ದಂತೆ “ಸಾಕು, ಇನ್ನಷ್ಟು ಹೊಡೆಯಬೇಡಿ, ಸಾಯಬಹುದು” ಎಂದು ಹೇಳಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ದಾಖಲಾಗಿದೆ. ಘಟನೆ ಬಳಿಕ ಮೃತದೇಹವನ್ನು ಸ್ಥಳಾಂತರಿಸಲು ಸಹಾಯ ಕೋರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದಾನೆ ಎಂಬ ಅಂಶವೂ ತನಿಖೆಯಲ್ಲಿ ಉಲ್ಲೇಖವಾಗಿದೆ.
ಇನ್ನೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಮೊಬೈಲ್‌ಗಳಲ್ಲಿದ್ದ ಡಿಜಿಟಲ್ ಸಾಕ್ಷ್ಯಗಳು ತನಿಖೆಗೆ ಮತ್ತಷ್ಟು ಬಲ ನೀಡಿವೆ. ಅಳಿಸಿ ಹಾಕಲಾಗಿದ್ದ ಫೋಟೋಗಳು, ವಿಡಿಯೊಗಳು ಹಾಗೂ ಇತರೆ ಮಾಹಿತಿಯನ್ನು ವಿಧಿವಿಜ್ಞಾನ ಪ್ರಯೋಗಾಲಯ (FSL) ಯಶಸ್ವಿಯಾಗಿ ಮರುಪಡೆಯಲಾಗಿದೆ. ತನಿಖಾ ಮೂಲಗಳ ಪ್ರಕಾರ, ಈ ಪೈಕಿ ಪ್ರಮುಖ ಡಿಜಿಟಲ್ ಸಾಕ್ಷ್ಯಗಳು ವಿನಯ್ ಬಳಕೆ ಮಾಡುತ್ತಿದ್ದ ಮೊಬೈಲ್‌ನಲ್ಲೇ ಪತ್ತೆಯಾಗಿವೆ ಎನ್ನಲಾಗಿದೆ.
ಪ್ರಕರಣದ 8ನೇ ಆರೋಪಿ ರವಿಶಂಕರ್ ಚಿತ್ರದುರ್ಗ ಮೂಲದವನಾಗಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲು ಬಳಸಲಾಗಿದ್ದ ಕಾರನ್ನು ಚಾಲನೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಕೃತ್ಯದ ಬಳಿಕ ಪ್ರಕರಣ ಮುಚ್ಚಿಹಾಕುವ ಯತ್ನದ ಭಾಗವಾಗಿಯೂ ಅವನ ಹೆಸರು ಕೇಳಿಬಂದಿತ್ತು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಒಬ್ಬರ ಹಿಂದೆ ಮತ್ತೊಬ್ಬ ಆರೋಪಿ ಮಾಫಿ ಸಾಕ್ಷಿಯಾಗಲು ಮುಂದಾಗುತ್ತಿರುವುದು ತನಿಖೆಯ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆ ಇದೆ.

