ಬೆಂಗಳೂರು: ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣವನ್ನು ಬೆಳೆಸಲು ಎರಡು ಮಹತ್ವದ ಯೋಜನೆಗಳ ಘೋಷಣೆ ಮಾಡಲಾಗುತ್ತದೆ ಎಂದು ವೈಜ್ಞಾನಿಕ ಸಂಶೋಧನಾ ಚಿಂತಕ ಡಾ. ಹುಲಿಕಲ್ ನಟರಾಜ್ ಹೇಳಿದರು.
ಬೆಂಗಳೂರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ (KSSRC) ನ ಪ್ರಮುಖ ಪ್ರಸ್ತಾಪವಾಗಿದ್ದು, ನಾವು ಎರಡು ಶಾಶ್ವತ ನಕ್ಷತ್ರಮಂಡಿರಗಳನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಅ್ಯಾನಿ ಬೆಸಂಟ್ ಪಾರ್ಕ್, ದೊಡ್ಡಬಳ್ಳಾಪುರ ಮತ್ತು ತುಮಕೂರಿನ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ಈ ನಕ್ಷತ್ರಮಂಡಿರಗಳು 10 ಮೀಟರ್ ಡೋಮ್ ಹೊಂದಿದ್ದು, 85 ರಿಂದ 100 ಆಸನ ಸಾಮರ್ಥ್ಯವನ್ನು ಹೊಂದಿರುತ್ತವೆ.
4K ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನದಿಂದ ಸಜ್ಜಿತವಾಗಿದ್ದು, ಅನೇಕ ವಿಜ್ಞಾನಪೂರ್ಣ ಶೋಗಳು ಹಾಗೂ ಅಂಧಶ್ರದ್ದೆ ವಿರುದ್ಧದ ಕಿರುಚಿತ್ರಗಳನ್ನು ತೋರಿಸಲಾಗುತ್ತದೆ. ಈ ನಕ್ಷತ್ರಮಂಡಿರವನ್ನು ನಿರ್ಮಿಸಲು 2.5 ರಿಂದ 3 ಕೋಟಿ ಮೊತ್ತದ CSR ಅನುದಾನವನ್ನು ಬಳಸಲಾಗುತ್ತಿದೆ. ಈ ಅನುದಾನದಿಂದ ಡೋಮ್ ನಿರ್ಮಾಣದಿಂದ ಹಿಡಿದು ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನ, ಧ್ವನಿವೈಜ್ಞಾನಿಕ ವ್ಯವಸ್ಥೆ, ವಿಜ್ಞಾನ ಚಲನಚಿತ್ರಗಳು ಹಾಗೂ ಪ್ರಾರಂಭಿಕ ನಿರ್ವಹಣಾ ವ್ಯವಸ್ಥೆಗಳವರೆಗೆ ಎಲ್ಲವೂ ಒಳಗೊಂಡಿದೆ.
ಇದರಲ್ಲಿ ನಮಗೆ ಸಹಭಾಗಿಯಾಗಿ ಭಾರತ್ ಡೋಮ್ ಇನೋವೆಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕರ್ನಾಟಕ ಮೂಲದ ಸ್ಟಾರ್ಟಪ್ ಇವರು ಆಧುನಿಕ ತಂತ್ರಜ್ಞಾನದೊಂದಿಗೆ ವಿಶಿಷ್ಟ ವಿನ್ಯಾಸದ ನಕ್ಷತ್ರಮಂಡಿರಗಳನ್ನು ನಿರ್ಮಿಸುವ ಪೈಪೋಟಿದಾರರು. ವೇಗವಾಗಿ ಸ್ಥಾಪನೆಗೊಳ್ಳುವ ಹಾಗೂ ಗ್ರಾಹ್ಯ ಅನುಭವ ಒದಗಿಸುವ ಈ ಡೋಮ್‌ಗಳು ಗ್ರಾಮೀಣ ಹಾಗೂ ನಗರ ಭಾಗದ ಮಕ್ಕಳಿಗೆ ವಿಜ್ಞಾನವನ್ನು ಪರಿಚಯಿಸುತ್ತಿವೆ. ಈ ನಕ್ಷತ್ರಮಂಡಿರ ಪ್ರಾರಂಭವಾದ ನಂತರ ಪ್ರತಿದಿನ ಸುತ್ತು 500 ಮಕ್ಕಳು ಇದರ ಅನುಭವ ಪಡೆಯಲಿದ್ದಾರೆ.
ಇದರಲ್ಲಿ ಸರ್ಕಾರಿ ಶಾಲಾ ಮಕ್ಕಳಿಂದ ಹಿಡಿದು, ಹಳ್ಳಿಯ ಮಕ್ಕಳು ಹಾಗೂ ವಿಜ್ಞಾನ ಪ್ರವಾಸದಲ್ಲಿರುವ ಮಕ್ಕಳು ಭಾಗಿಯಾಗಲಿದ್ದಾರೆ. ಪ್ರಥಮ ಹಂತದಲ್ಲಿ ಸುಮಾರು 1.5 ಲಕ್ಷ ಮಕ್ಕಳಿಗೆ ವಿಜ್ಞಾನವನ್ನು ಈ ಮೂಲಕ ತಲುಪಿಸಬಹುದಾಗಿದೆ. ಇದು ಒಂದು ದಿನದ ಕಾರ್ಯಕ್ರಮವಲ್ಲ. ಮುಂದಿನ 20-30 ವರ್ಷಗಳ ಕಾಲ ಈ ನಕ್ಷತ್ರಮಂಡಿರದ ಮೂಲಕ ವಿಜ್ಞಾನ ಅಧ್ಯಯನ, ಶಿಕ್ಷಕರ ತರಬೇತಿ, ರಾತ್ರಿಯ ಗಗನ ವೀಕ್ಷಣಾ ಶಿಬಿರಗಳು ಹಾಗೂ ಅಂಧಶ್ರದ್ದೆ ವಿರೋಧಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಈ ನಕ್ಷತ್ರಮಂಡಿರಗಳು ಕರ್ನಾಟಕದ ಶೈಕ್ಷಣಿಕ ಭೂದೃಶ್ಯದಲ್ಲಿ ಶಾಶ್ವತವಾದ ವಿಜ್ಞಾನ ಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ಚಿಕ್ಕ ಹನುಮಂತೇಗೌಡ, ಕಾರ್ಯದರ್ಶಿ ರವಿಬಿಳಿಶಿವಾಲೆ, ಸಂಘಟನಾ ಕಾರ್ಯದರ್ಶಿ ಸ್ವಾಮಿ, ರಾಜ್ಯ ಸಂಚಾಲಕ ದಾನಿ ಬಾಬುರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

