ಬೆಂಗಳೂರು: ಅಮೆರಿಕದ ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್ ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಬರ್ ವಂಚನೆ ಎಸಗುತ್ತಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಮತ್ತು ಆಕಾಶ್ ಗುಪ್ತಾ ಬಂಧಿತ ಸೈಬರ್ ವಂಚಕರು. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದ ಇವರಿಬ್ಬರು, ಸುಲಭವಾಗಿ ಕೋಟ್ಯಂತರ ರೂಪಾಯಿ ಹಣ ಸಂಪಾದಿಸುವ ದುರಾಸೆಗೆ ಬಿದ್ದು ಈ ಕೃತ್ಯಕ್ಕೆ ಕೈ ಹಾಕಿದ್ದರು.

ಬೆಂಗಳೂರಿನಲ್ಲೇ ರಹಸ್ಯವಾಗಿ ನಕಲಿ ಕಾಲ್ ಸೆಂಟರ್ ಒಂದನ್ನು ತೆರೆದಿದ್ದ ಆರೋಪಿಗಳು, ಆಧುನಿಕ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಅಮೆರಿಕನ್ ನಾಗರಿಕರನ್ನು ಸಂಪರ್ಕಿಸುತ್ತಿದ್ದರು. ಅಮೆರಿಕದ ಪ್ರಮುಖ ಬ್ಯಾಂಕ್ ಹಾಗೂ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಮಾತನಾಡುತ್ತಿದ್ದ ಇವರು, ಅಲ್ಲಿನ ಜನರನ್ನು ನಂಬಿಸಿ ಅವರ ಬ್ಯಾಂಕ್ ಖಾತೆಗಳ ವಿವರ ಪಡೆದು ಕೋಟ್ಯಂತರ ರೂಪಾಯಿ ದೋಚುತ್ತಿದ್ದರು.

ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಈ ಇಬ್ಬರು ಖದೀಮರು ಇದುವರೆಗೆ ಸುಮಾರು 40 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಅಮೆರಿಕನ್ನರಿಂದ ದೋಚಿರೋದು ಪತ್ತೆಯಾಗಿದೆ. ವಿದೇಶಿ ಪ್ರಜೆಗಳಿಗೆ ಭಾರತದಿಂದಲೇ ದೊಡ್ಡ ಮಟ್ಟದ ವಂಚನೆ ನಡೆಯುತ್ತಿರುವ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದಿದ್ದ ಸೈಬರ್ ಕಮಾಂಡ್ ಸೆಂಟರ್ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಆರೋಪಿಗಳ ಅಡಗುದಾಣದ ಮೇಲೆ ದಾಳಿ ನಡೆಸಿ ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಾದ ಪ್ರಶಾಂತ್ ಮತ್ತು ಆಕಾಶ್ ಗುಪ್ತಾನನ್ನು ಪೊಲೀಸರು ತಮ್ಮ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.