ಬೆಂಗಳೂರು : ಭಾರೀ ಮಳೆ ಮತ್ತು ಬಿರುಗಾಳಿಯ ಆರ್ಭಟಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸಂಪೂರ್ಣ ವ್ಯತ್ಯಯಗೊಂಡಿದೆ.

ಪ್ರತಿಕೂಲ ಹವಾಮಾನ ಹಾಗೂ ರನ್‌ವೇ ಬಳಿ ದೃಶ್ಯ ಗೋಚರತೆ ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ.

ಧಾರಾಕಾರ ಮಳೆಯ ಕಾರಣದಿಂದಾಗಿ ಬೆಂಗಳೂರಿಗೆ ಬರಬೇಕಿದ್ದ ಎರಡು ಪ್ರಮುಖ ವಿಮಾನಗಳ ಮಾರ್ಗವನ್ನು ಬದಲಾಯಿಸಿ, ಬೇರೆ ನಿಲ್ದಾಣಗಳಿಗೆ ರವಾನಿಸಲಾಗಿದೆ. ಇದರೊಂದಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳ ಒಟ್ಟು 14 ವಿಮಾನಗಳ ಹಾರಾಟ ತೀವ್ರ ವಿಳಂಬಗೊಂಡಿದೆ.

ವಿಮಾನಗಳ ದಿಢೀರ್ ವೇಳಾಪಟ್ಟಿ ಬದಲಾವಣೆಯಿಂದಾಗಿ ನೂರಾರು ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದ್ದು, ತೀವ್ರ ಪರದಾಟ ನಡೆಸಿದರು. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕವಷ್ಟೇ ವಿಮಾನಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.