ಬೆಂಗಳೂರು : ಬರೋಬ್ಬರಿ 400 ಕೆಜಿ ಕೂದಲು ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಲಕ್ಷ್ಮೀಪುರ ಕ್ರಾಸ್‌ನಲ್ಲಿರುವ ಗೋದಾಮಿನಲ್ಲಿ ಮಾರ್ಚ್ 1 ರಂದು ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ ಗೋದಾಮಿನ ಬೀಗ ಮುರಿದು ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ಬೆಲೆ ಬಾಳುವ 400 ಕೆಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮಾರನೇ ದಿನ ಗೋದಾಮು ಮಾಲೀಕ ವೆಂಕಟರಮಣ ಅವರು ಸ್ಥಳಕ್ಕೆ ಬಂದಾಗ ಕಳ್ಳತನ ಆಗಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆದರೆ ಕಳ್ಳರು ಕದ್ದ ಕೂದಲುಗಳನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಪ್ರದೇಶಗಳಿಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಅಲ್ಲದೇ ಈ ಕೂದಲುಗಳನ್ನು ಚೀನಾ, ಬರ್ಮಾ ಮತ್ತು ಹ್ಯಾಂಕಾಂಗ್‌ಗೆ ರಫ್ತು ಮಾಡಲಾಗಬೇಕಾಗಿತ್ತು. ಆದರೆ ಇದೀಗ ಐದು ಜನರ ಪೈಕಿ ಯಲ್ಲಪ್ಪ ಗೊಲ್ಲರ್ ನನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ಕು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ

