ಬೆಂಗಳೂರು: ಯುವತಿಯೊಬ್ಬಳು ಬೈಕ್‌ನಲ್ಲಿ ಸವಾರಿ ಮಾಡುತ್ತಾ ಸಾರ್ವಜನಿಕವಾಗಿ ಹುಚ್ಚಾಟ ಮೆರೆದಿರುವ ಘಟನೆ ಬನಶಂಕರಿ ವ್ಯಾಪ್ತಿಯಲ್ಲಿ ನಡೆದಿದೆ.

ಹೆಲ್ಮೆಟ್ ಧರಿಸದೆ, ಕೈಯಲ್ಲಿ ಬಾಟಲಿ ಹಿಡಿದು ಆಕೆ ನಡೆಸಿದ ಈ ಸಿನಿಮೀಯ ಸ್ಟೈಲ್‌ನ ಪಯಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಕೆಯ ಈ ನಡವಳಿಕೆಯನ್ನು ನೋಡಿದರೆ ಆಕೆ ಮದ್ಯಪಾನ ಮಾಡಿರಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಬನಶಂಕರಿ ಕಡೆಯಿಂದ ಬಿಟಿಎಂ ಲೇಔಟ್ ಕಡೆಗೆ ತೆರಳುತ್ತಿದ್ದ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಈ ಯುವತಿ, ಮೈಮರೆತು ಕುಣಿಯುತ್ತಾ ಎಂಜಾಯ್ ಮಾಡಿದ್ದಾಳೆ. ಸುಮಾರು ನಾಲ್ಕೈದು ಕಿಲೋಮೀಟರ್‌ಗಳ ವರೆಗೆ ಇದೇ ರೀತಿ ಬೈಕ್ ಮೇಲೆ ತೂರಾಡುತ್ತಾ, ಕೈಯಲ್ಲಿ ಬಾಟಲಿಯೊಂದನ್ನು ಹಿಡಿದು ಕುಣಿಯುತ್ತಾ ಸಾಗಿದ್ದಾಳೆ.

ಯುವತಿಯ ಈ ಅತಿರೇಕದ ವರ್ತನೆಯನ್ನು ಕಂಡು ಆಕೆಯ ಹಿಂದೆ ಕಾರಿನಲ್ಲಿ ಬರುತ್ತಿದ್ದ ಯುವಕರ ಗುಂಪೊಂದು ವಿಡಿಯೋ ಮಾಡಿದೆ. ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೂ ತೊಂದರೆಯಾಗುವಂತೆ ಆಕೆ ಬೈಕ್ ಮೇಲೆ ಆಟವಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಯುವತಿ ಮತ್ತು ಬೈಕ್ ಸವಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.