ಬೆಂಗಳೂರು: ಸೈಬರ್‌ ಕ್ರೈಂ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ವಂಚಕನೊಬ್ಬ ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿ ಬಳಿಯಿಂದ ಬರೋಬ್ಬರಿ 1.53 ಕೋಟಿ ರೂಪಾಯಿ ಪೀಕಿಸಿದ್ದಾನೆ.

ಪೊಲೀಸರು 1.4 ಕೋಟಿ ರೂ. ಅನ್ನು 50ಕ್ಕೂ ಹೆಚ್ಚು ಖಾತೆಗಳಿಂದ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆಗೆ ಒಳಗಾದ ದಂಪತಿ ನೀಡಿ ದೂರು ಆಧರಿಸಿ ಪೂರ್ವ ವಲಯದ ಸೈಬರ್ ಕ್ರೈಂ ‌ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ದಂಪತಿಗೆ ಬ್ಯಾಂಕ್‌ ಅಧಿಕಾರಿಗಳ ಜತೆ ಸೇರಿ ವಂಚಕ ಬಲೆ ಬೀಸಿದ್ದನು. ಹೆಚ್ಚಿನ ಲಾಭದ ಆಸೆ ತೋರಿಸಿ ಈ ಕೃತ್ಯ ಎಸಗಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ಬ್ರಿಟನ್‌ನಲ್ಲಿ ಕುಳಿತು ವಂಚಕ ಈ ವಂಚನೆ ಜಾಲವನ್ನು ನಡೆಸುತ್ತಿದ್ದನು. ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದಿದ್ದನು. ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್‌ಸೈಟ್‌ ಒಂದನ್ನು ತೆರೆದು ದಂಪತಿಗೆ ಇದರ ಆಕ್ಸೆಸ್‌ ಕೂಡ ನೀಡಿದ್ದನು.

ಇದರಲ್ಲಿ ತಮ್ಮ ಹೂಡಿಕೆ ಬೆಳೆಯುತ್ತಿರುವುದನ್ನು ಕಂಡು ದಂಪತಿ ಖುಷಿಯಾಗಿದ್ದರು. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದ್ದಾರೆ. ಆದರೆ ಹಣ ತೆಗೆಯಲು ಆಗುತ್ತಿರಲಿಲ್ಲ. ಇದರಿಂದ ಅವರಿಗೆ ಅನುಮಾನ ಮೂಡತೊಡಗಿತ್ತು. ಅಷ್ಟೇ ಅಲ್ಲ ನಕಲಿ ವೆಬ್‌ಸೈಟ್‌ನ ಆಕ್ಸೆಸ್‌ ಕೂಡ ಹೋಗಿತ್ತು. ಕೊನೆಗೆ ದಂಪತಿಯನ್ನು ಈ ವೆಬ್‌ಸೈಟ್‌ ಬ್ಲಾಕ್ ಮಾಡಿತ್ತು.

ಇದರೊಂದಿಗೆ ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ದೃಢವಾಗಿತ್ತು. ಕೂಡಲೇ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದಲ್ಲದೆ ಬ್ಯಾಂಕ್‌ ಅಧಿಕಾರಿಗಳ ಜತೆ ಸೇರಿ ನಡೆಸಿದ್ದ ಈ ವಂಚನೆ ಜಾಲವನ್ನು ಭೇದಿಸಿದ್ದಾರೆ.

ಆರೋಪಿ ಲಂಡನ್​​ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಇದಕ್ಕಾಗಿ ಉತ್ತರ ಭಾರತದ ಹಲವಾರು ಅಕೌಂಟ್​ಗಳನ್ನು ಬಳಕೆ ಮಾಡಿದ್ದಾನೆ. ಷೇರು ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್​ಸೈಟ್ ರಚನೆ ಮಾಡಿದ್ದಾನೆ. ಆರೋಪಿ ಯಾರು ಎಂಬುದರ ಸ್ಪಷ್ಟತೆ ಇಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಳ್ಳಲಾದ ಹಣವನ್ನು ಪೊಲೀಸರು ವಂಚನೆಗೆ ಒಳಗಾದ ದಂಪತಿಗೆ ಮರಳಿಸುತ್ತಿದ್ದಾರೆ.