ಬೆಂಗಳೂರು : ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದ ಬಳಿ ಕಾರೊಂದು ಏಕಾಏಕಿ ಹೊತ್ತಿ ಉರಿದ ಘಟನೆ ನಡೆದಿದೆ.

ವಿಜಯನಗರ ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಆಕಸ್ಮಿಕವಾಗಿ ಹೊತ್ತಿ ಉರಿದಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯಿಂದಾಗಿ ವಿಜಯನಗರ ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಡುರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲಿದ್ದ ವಾಹನ ಸವಾರರು ಮತ್ತು ಸ್ಥಳೀಯರಲ್ಲಿ ಆತಂಕದ ವಾತಾವಾರಣ ನಿರ್ಮಾಣಗೊಂಡಿತ್ತು. ಅದೇ ರೀತಿ ಕಾರು ಏಕಾಏಕಿ ಹೊತ್ತು ಉರಿದ ಘಟನೆಗೆ ತಾಂತ್ರಿಕ ದೋಷ ಕಾರಣವಿರಬಹುದೆಂದು ಶಂಕಿಸಲಾಗಿದೆ.