ಬೆಂಗಳೂರು: ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಅಕ್ರಮವಾಗಿ ಜೂಜಾಟ ಹಾಗೂ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 23 ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಗರದ ಸಿಸಿಬಿಯ ವಿಶೇಷ ತನಿಖಾ ದಳದ ಅಧಿಕಾರಿಗಳು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಏಕಕಾಲಕ್ಕೆ ಸಂಘಟಿತ ದಾಳಿ ನಡೆಸಿ ಈ ಯಶಸ್ವಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ದಾಳಿಯ ವೇಳೆ ಒಟ್ಟು 17 ಪ್ರತ್ಯೇಕ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ 23 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಬಂಧಿತರಿಂದ ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಭಾರಿ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ‘ದಾಳಿಯ ವೇಳೆ ₹1.10 ಲಕ್ಷ ಮೌಲ್ಯದ 7 ಮೊಬೈಲ್ ಫೋನ್‌ಗಳು, ₹1,06,433 ನಗದು ಹಾಗೂ ಬರೋಬ್ಬರಿ ₹13.37 ಕೋಟಿ ಮುಖಬೆಲೆಯ ಬೆಟ್ಟಿಂಗ್ ಚಿಪ್ಸ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

