ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ವನ್ಯ ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ದಯಾತ್ಮಕ ಧನವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಕ್ಷೇತ್ರದ ಅಡಿ ರಾಜ್ಯದಲ್ಲಿ ಕಾಡಾನೆ ಹಾಗೂ ಚಿರತೆ ಹಾವಳಿಯನ್ನು ನಿಯಂತ್ರಿಸಲು ಈಗಾಗಲೇ ಎಂಟು ಆನೆ ಕಾರ್ಯಪಡೆ ಹಾಗೂ ಎರಡು ಚಿರತೆ ಕಾರ್ಯಪಡೆಗಳನ್ನು ರಚಿಸಿದ್ದು, ಪ್ರಸಕ್ತ ಸಾಲಿನಲ್ಲಿ 17 ಕೋಟಿ ರೂ ಒದಗಿಸುವ ಮೂಲಕ ಕಾರ್ಯ ಯೋಜನೆಯನ್ನು ಮುಂದುವರೆಸಲಾಗುವುದು.
ಇನ್ನು ಮಾನವ-ಆನೆ ಸಂಘರ್ಷ ತಡೆಗಟ್ಟಲು 2015 ರಿಂದ ಇಲ್ಲಿಯವರೆಗೆ 392 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಇನ್ನೂ 150 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳಿಗಾಗಿ 2025-26ನೇ ಸಾಲಿನಲ್ಲಿ 60 ಕೋಟಿ ರೂ. ಮೀಸಲಿರಿಸಲಾಗಿದೆ.
ಕರ್ನಾಟಕದಲ್ಲಿ ಮಾನವ-ಆನೆ ಸಂಘರ್ಷದ ಸಮಸ್ಯೆಯನ್ನು ಪರಿಹರಿಸಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ಚದರ ಕಿ.ಮೀ ವ್ಯಾಪ್ತಿಯಲ್ಲಿ ʻಕಾಡಾನೆ Soft Release ಕೇಂದ್ರʼ ವನ್ನು ಸ್ಥಾಪಿಸಲು 20 ಕೋಟಿ ರೂ. ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ನಲ್ಲಿ ತಿಳಿಸಿದ್ದಾರೆ.

