ಬೆಂಗಳೂರು : ಬೆಂಗಳೂರಿಗರೇ ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ ವಹಿಸಿ. ಏಕೆಂದರೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಟ್ರಾಫಿಕ್ ಪೊಲೀಸರು ದಂಡದ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.
ಈ ಕುರಿತು ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಕುಲ್ದೀಪ್ ಕುಮಾರ್ ಆರ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಹಾಗೂ ಕಾನೂನಿನ ಕಲಂ ಆಧಾರದ ಮೇಲೆ ವಿಧಿಸುವ ದಂಡದ ವಿವರಗಳನ್ನು ಪ್ರಕಟಿಸಿದ್ದಾರೆ.
ವಾಹನದ ಚಾಲಕ/ಸವಾರರು ಮದ್ಯಪಾನ ಮತ್ತು ಮಾದಕ ವಸ್ತುವಿನ ಅಮಲಿನಲ್ಲಿ ಚಾಲನೆ ಮಾಡಿದರೆ ಐ.ಎಂ.ವಿ. ಕಾಯ್ದೆ ಸೆಕ್ಷನ್ 185ರನ್ವಯ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕ್ರಮ ಕೈಗೊಳ್ಳಲಾಗುವುದು. ಆರೋಪಿಯ ಚಾಲನಾ ಅರ್ಹತಾ ಪತ್ರವನ್ನು ಅಮಾನತ್ತಿಗಾಗಿ ಸಂಬಂಧಿಸಿದ ಆರ್.ಟಿ.ಓ ರವರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಹಾಗೂ ಕಾನೂನಿನ ಕಲಂ ಆಧಾರದ ಮೇಲೆ ವಿಧಿಸುವ ದಂಡದ ವಿವರಗಳು:
- ವಾಹನ ಚಾಲಕರು ಸಮವಸ್ತ್ರ ಧರಿಸದೇ ವಾಹನ ಚಲಾಯಿಸುವುದು ಕಂಡರೆ ಐಎಂವಿ ಕಾಯ್ದೆ ಸೆಕ್ಷನ್ 177ರ ನಿಯಮದನ್ವಯ 500 ರೂಪಾಯಿ ದಂಡ.
- ವಾಹನದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡು ಬಂದಲ್ಲಿ ಐಎಂವಿ ಕಾಯ್ದೆ ಸೆಕ್ಷನ್ 194(ಎ) ಪ್ರಕಾರ ತಲಾ 200 ರೂಪಾಯಿ ದಂಡ.
- ನಿಗದಿ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದೊಯ್ದರೆ ಐಎಂವಿ ಕಾಯ್ದೆ ಸೆಕ್ಷನ್ 194(ಎ) ಪ್ರಕಾರ ತಲಾ 200 ರೂಪಾಯಿ ದಂಡ.
- ಪ್ರಯಾಣಿಕರು ಕರೆದ ಸ್ಥಳಕ್ಕೆ ಬಾಡಿಗೆ ಹೋಗಲು ನಿರಾಕರಣೆ ಮಾಡಿದರೆ ಅಂತವರಿಗೆ ಐಎಂವಿ ಕಾಯ್ದೆ ಸೆಕ್ಷನ್ 177 & ಕೆಎಂವಿ ನಿಯಮ 16(ಬಿ) ಅನ್ವಯ 500 ರೂಪಾಯಿ ದಂಡ.
- ಜೊತೆಗೆ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುವುದು ಕಂಡುಬಂದಲ್ಲಿ ಅಂತವರಿಗೆ ಐಎಂವಿ ಕಾಯ್ದೆ ಸೆಕ್ಷನ್ 177& ಕೆಎಂವಿ ನಿಯಮ 16(ಜೆ) 500 ರೂಪಾಯಿ ದಂಡ ಬೀಳಲಿದೆ.
- ಪೊಲೀಸರೊಂದಿಗೆ ಅಸಭ್ಯವಾಗಿ ವರ್ಥಿಸಿದರೆ ಐಎಂವಿ ಕಾಯ್ದೆ ಸೆಕ್ಷನ್ 179ರ ಪ್ರಕಾರ 2,000 ರೂಪಾಯಿ ದಂಡ.
ಡಿಸ್ ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸಿದರೆ ಐಎಂವಿ ಕಾಯ್ದೆ ಸೆಕ್ಷನ್ 177ರ ಪ್ರಕಾರ ಕೋರ್ಟ್ ವಿಲೇವಾರಿ.