ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಶಾಸಕರಿಂದ ಪಕ್ಷಕ್ಕೆ ದ್ರೋಹ ಮತ್ತು ವಂಚನೆಯಾಗಿರುವದು ನಿಜ. ಯಾರು ಮಾಡಿದ್ದಾರೆ ಎಂಬುದು ಇದುವರೆಗೆ ಗೊತ್ತಾಗಿಲ್ಲ. ಅದರ ಶೋಧನೆಯಲ್ಲಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಗೊತ್ತಾಗಲಿ. ಮುಂದೆ ಅವರು ಜನುಮದಲ್ಲಿ ಚುನಾವಣೆಗೆ ನಿಲ್ಲಬಾರದು. ಹಾಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಡ್ಡ ಮತದಾನ ಮಾಡಿದವರ ಬಗ್ಗೆ ಗುರುತಿಸುವ ಕೆಲಸ ನಡೆದಿದೆ. ವಿಧಾನ ಪರಿಷತ್ ಚುನಾವಣೆಯ ಸಮಯದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದಿದೆ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರಿಗೆ ವಿವರಣೆ ನೀಡುತ್ತೇವೆ. ಈ ಸಂಬಂಧ ಚರ್ಚಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸಮಯ ಕೇಳಿದ್ದೇವೆ. ಸಮಯ ಸಿಕ್ಕ ತಕ್ಷಣ ನಾವು ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ದೆಹಲಿಗೆ ತೆರಳಿ ವಿವರಣೆ ನೀಡಲಿದ್ದೇವೆ ಎಂದರು.
ಈ ವಿಷಯದಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ ಮಾಡಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರನ್ನು ಸೆಳೆದು ಅವರಿಗೆ ಆಮಿಷ ತೋರಿಸಿ ಅಡ್ಡ ಮಾತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ. 2019 ರಲ್ಲಿ ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಬಗ್ಗೆ ಟೀಕಾಪ್ರಹಾರ ಮಾಡಿದ್ದ ಇದೇ ಕಾಂಗ್ರೆಸ್ ನಾಯಕರು ಈಗ ತಾವೇ ಆಪರೇಷನ್ ಹಸ್ತ ಮಾಡಿದ್ದಾರೆ. ನಮ್ಮ ಬಗ್ಗೆ ಟೀಕೆ ಮಾಡಿದವರಿಗೆ ಇದರಿಂದ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಅಡ್ಡ ಮತದಾನದ ಕುರಿತು ಆಣೆ ಪ್ರಮಾಣದ ಬಗ್ಗೆ ವಿಜಯೇಂದ್ರ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನಾಳೆ ಅಧ್ಯಕ್ಷರು ಹಾಗೂ ನಾಯಕರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

