Categories: ವಿಜಯಪುರ

ದೇಶ ಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ : ಎಂ.ಬಿ.ಪಾಟೀಲ

ವಿಜಯಪುರ:  ಕಣ್ಣ ಮುಂದೆಯೇ ಇದ್ದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಸಾವಿರಾರು ಡ್ಯಾಮ್‌ಗಳನ್ನು ಕಟ್ಟಿದ್ದು ಯಾರು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು. ಮತಕ್ಷೇತ್ರದ ಬಂಡೆಪ್ಪ ಸಾಲವಾಡಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ದೊಡ್ಡ ದೊಡ್ಡ ಸಂಸ್ಥೆ, ಶಾಲೆ, ಕಾರ್ಖಾನೆಗಳನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. ಒಂದು ಸೂಜಿಯೂ ದೇಶದಲ್ಲಿ ತಯಾರಾಗದ ಸ್ಥಿತಿಯನ್ನು ಮೀರಿಸಿ ಜಗತ್ತಿನ ಮುಂದುವರಿದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಇಟ್ಟಿದ್ದು ನಮ್ಮ ಪಕ್ಷ. ಇವರು ಅಧಿಕಾರಕ್ಕೆ ಬಂದು ಅಚ್ಛೇ ದಿನ್ ಅಂತ ಹೇಳಿ ಕೆಟ್ಟ ಪ್ರಯೋಗಗಳನ್ನು ಮಾಡಿದರು. ನೋಟು ಬ್ಯಾನ್ ಮಾಡಿ ಆರ್ಥಿಕ ಸ್ಥಿತಿ ಹದಗೆಡಿಸಿದರು. ಮನಮೋಹನ್ ಸಿಂಗ್ ಅವರು ಇದ್ದಾಗ ಎಪ್ಪತ್ತೆರಡು ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿಯವರು ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಹೊಟ್ಟೆ ತುಂಬಿಸುವ, ಜನರ ಬದುಕು ಸುಧಾರಿಸುವ ಕಾರ್ಯಗಳನ್ನು ಮಾಡಿದೆ ಎಂದರು.

ಭಾಗ್ಯಗಳ ಮೂಲಕ ಜನಸಾಮಾನ್ಯರ ಜೀವನ ಸುಧಾರಿಸಿದೆ. ಈಗ ಗ್ಯಾರಂಟಿಗಳ ಮೂಲಕ ವಿಶ್ವಾಸ ಗಳಿಸಿದ್ದೇವೆ. ಹೇಳಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ತುಟ್ಟಿ ಭಾಗ್ಯ ನೀಡಿರುವ ಬಿಜೆಪಿ ಸರಕಾರದ ದುರ್ದಿನ ದೂರಗೊಳಿಸಿದ್ದು ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಉಚಿತ ಪ್ರಯಾಣ, ಅನ್ನ ಭಾಗ್ಯ, ಯುವ ನಿಧಿಗಳಂತಹ ಕಾರ್ಯಕ್ರಮಗಳು ಎಂದು ವಿವರಿಸಿದರು.

ಈ ಚುನಾವಣೆ ಸುಳ್ಳು ಮತ್ತು ಸತ್ಯದ ನಡುವೆ ಇದೆ. ಚುನಾವಣೆ ಬಾಂಡ್ ಮೂಲಕ ಇವರ ಬಣ್ಣ ಬಯಲಾಗಿದೆ. ಪ್ರಾಮಾಣಿಕತೆ ಪಾಠ ಹೇಳುವವರ ಮುಖವಾಡ ಕಳಚಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಜಿಲ್ಲೆ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು. ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಅಪ್ಪಾಜಿ ನಾಡಗೌಡ ಮಾತನಾಡಿ, ಈ ಭಾಗ ಕಾಂಗ್ರೆಸ್ ಪಕ್ಷವನ್ನು ಮೊದಲಿಂದ ಪೋಷಿಸುತ್ತ ಬಂದಿದೆ. ಕಾಂಗ್ರೆಸ್ ಯಾವತ್ತೂ ಸಿದ್ಧಾಂತವಿಟ್ಟುಕೊಂಡು ಮಾತು ಉಳಿಸಿಕೊಳ್ಳುವ ಪಕ್ಷ. ಹೇಳಿದಂತೇ ಐದು ಗ್ಯಾರಂಟಿಗಳನ್ನು ಪೂರೈಸಿದೆ. ಸದ್ಯ ಕೇಂದ್ರದಲ್ಲೂ ಪಕ್ಷ ಹಲವು ಭರವಸೆಗಳನ್ನು ನೀಡಿದೆ. ಅವು ಕೂಡ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ಬರಲಿವೆ ಎಂದರು.

ಬೂದಿಹಾಳ-ಪೀರಾಪುರ ಸೇರಿದಂತೆ ಹಲವು ನೀರಾವರಿ ಯೋಜನೆಗಳನ್ನು ಪೂರೈಸಿರುವ ಹೆಗ್ಗಳಿಕೆ ನಮ್ಮದು. ಮತ್ತಷ್ಟು ಯೋಜನೆಗಳು ಸಾಕಾರಗೊಳ್ಳಬೇಕಾದರೆ ಗೆಜೆಟ್ ನೋಟಿಫಿಕೇಶನ್ ಆಗಬೇಕು. ಇದೆಲ್ಲ ಸಾದ್ಯವಾಗುವುದು ಕಾಂಗ್ರೆಸ್‌ಗೆ ನೀವು ಮತ ನೀಡಿದಾಗ ಮಾತ್ರ ಎಂದರು.
ಫುಲ್ವಾಮಾ ನಂತಹ ಘಟನೆಗಳನ್ನು ಮತವಾಗಿ ಪರಿವರ್ತಿಸಿಕೊಳ್ಳುವ, ರಾಮ ಮಂದಿರವನ್ನು ಗುತ್ತಿಗೆ ಪಡೆಯುವ ಪಕ್ಷ ಬೇಕೋ ಅಭಿವೃದ್ಧಿಪರತೆ ಬೇಕೋ ನಿರ್ಧರಿಸಿ. ದೇಶವನ್ನು ಒಡೆದಾಳುವ ಸ್ಥಿತಿಯಿಂದ ಹೊರ ತನ್ನಿ ಎಂದು ಮನವಿ ಮಾಡಿದರು.

ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಒಮ್ಮೆಯೂ ಸಂಸದ ಜಿಗಜಿಣಗಿಯವರು ದನಿ ಎತ್ತಲಿಲ್ಲ. ನೀರಾವರಿ ಹೋಗಲಿ, ಸರಿಯಾದ್ದೊಂದು ರೈಲನ್ನೂ ವಿಜಯಪುರದಿಂದ ಓಡಿಸಲಿಲ್ಲ. ಮೂರು ಸಲ ಗೆದ್ದರೂ ಯಾರಿಗೂ ಮುಖ ತೋರಿಸಲಿಲ್ಲ. ನಮ್ಮ ಅಭ್ಯರ್ಥಿ ರಾಜು ಆಲಗೂರ್ ಅವರು ಅನುಭವಸ್ಥ ಮತ್ತು ವಿದ್ಯಾವಂತರಾಗಿದ್ದಾರೆ. ಇವರು ಲೋಕಸಭೆಯಲ್ಲಿ ನಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, ತಮಗೆ ಅವಕಾಶ ನೀಡಿದರೆ ಆಲಮಟ್ಟಿ ಅಣೆಕಟ್ಟು ಎತ್ತರಿಸಲು ಶತ ಪ್ರಯತ್ನ ಮಾಡುವುದಾಗಿ ಹೇಳಿದರು. ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಪ್ರಾಸ್ತಾವಿಕ ಮಾತನಾಡಿ, ಮೋದಿಯವರು ಕೊಟ್ಟ ಭರವಸೆ ಈಡೇರಸದೇ ಇರುವುದು ಚರ್ಚೆಯಾಗಬೇಕು. ರಾಜ್ಯ ಕಾಂಗ್ರೆಸ್ ಸರಕಾರ ಮಾಡಿರುವ ಸಾಧನೆ, ನೀರಾವರಿ ಯೋಜನೆ ಜಾರಿಗೊಳಿಸಿದ್ದನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ಭಾಗಕ್ಕೆ ನೀರು ನೀಡಿದ ಸಚಿವ ಎಂ.ಬಿ.ಪಾಟೀಲ, ಸಿಎಂ ಸಿದ್ದರಾಮಯ್ಯರನ್ನು ನೆನಪಿಸಿಕೊಂಡು ಮತ ನೀಡಬೇಕು. ಗ್ಯಾರಂಟಿಗಳ ಲಾಭ ನಿಲ್ಲಿಸುತ್ತೇವೆ ಎನ್ನುವ ಬಿಜೆಪಿ ಬೇಕೊ ಸಾಮಾನ್ಯರ ಬದುಕು ಸುಧಾರಿಸಿದ ಕಾಂಗ್ರೆಸ್ ಬೇಕೊ ನೀವು ನಿರ್ಧಾರ ಮಾಡಿ ಎಂದು ಹೇಳಿದರು.

ಬಿ.ಎಸ್. ಪಾಟೀಲ ಯಾಳಗಿ ಸ್ವಾಗತಿಸಿದರು. ಡಾ. ಸುಭಾಶ ಛಾಯಾಗೋಳ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದ ದೊಡ್ಡಮನಿ, ಬಶೀರ್ ಶೇಟ, ಗೌರಮ್ಮ ಮುತ್ತತ್ತಿ, ಶಿವಾನಂದ ಪಾಟೀಲ, ರಂಜಾನ್ ಮುಜಾವರ, ಸಿದ್ದನಗೌಡ ಪಾಟೀಲ, ಸುರೇಶಗೌಡ, ಸರಿತಾ ನಾಯಕ, ಕಾಸೀಂಗೌಡ, ಮುತ್ತಣ್ಣ ಚಂದ್ರಾಪುರ ಅನೇಕರಿದ್ದರು.

Nisarga K

Recent Posts

ಯುವಜನರನ್ನು ಆಧ್ಯಾತ್ಮಿಕ ಜಗತ್ತಿಗೆ ಕೊಂಡೊಯ್ದ ಗೊಸ್ಪೆಲ್ ಗಾಲಾ

ಆಧ್ಯಾತ್ಮಿಕ ವಿಚಾರದಿಂದ ದೂರ ಹೋಗುತ್ತಿರುವ ಯುವಜನರನ್ನು ಧಾರ್ಮಿಕ ವಿಚಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯಕ್ಕೆ ತೊಟ್ಟಂ ಸಂತ…

2 mins ago

ಜಾಗದ ತಕರಾರು: ನಗರಸಭಾ ಸದಸ್ಯನಿಂದ ದಂಪತಿ ಮೇಲೆ ಹಲ್ಲೆ, ಜೀವಬೆದರಿಕೆ

ಜಾಗದ ತಕರಾರಿಗೆ ಸಂಬಂಧಿಸಿ ದಂಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ…

16 mins ago

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ : ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ…

28 mins ago

ಭಾರೀ ಗಾಳಿ ಮಳೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಸಂಜೆ ಸುರಿದ ಜೋರಾದ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಪಲ್ಟಿಯಾದ…

31 mins ago

ದ.ಕ ಬರ ಪರಿಸ್ಥಿತಿ ಹಿನ್ನಲೆ ನೀರು ಪೂರೈಕೆಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗರ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.…

37 mins ago

ಕಲ್ಲಡ್ಕದಲ್ಲಿ ಪ್ರಥಮ ಮಳೆಗೆ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ಸಂಚಾರ ಅಸ್ತವ್ಯಸ್ತ

ನಿನ್ನೆ ಸುರಿದ ಪ್ರಥಮ ಮಳೆಗೆ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.

43 mins ago