News Karnataka Kannada
Saturday, May 04 2024
ವಿಜಯಪುರ

ಬಸವನ ಭೂಮಿಯಿಂದ ಮೊಳಗಿತು ಕಾಂಗ್ರೆಸ್‌ನ ‘ಲೋಕ ಕಹಳೆ’!

Vj
Photo Credit : NewsKarnataka

ವಿಜಯಪುರ: ಭೂಮಿ ಕೂಡ ಮೂರು ವರ್ಷಕ್ಕೊಮ್ಮೆ ಹೊಸ ಬೆಳೆ ಕೊಡುತ್ತೆ. ಆದರೆ, ಸದ್ಯದ ಸಂಸದ ಹದಿನೈದು ವರ್ಷದಿಂದ ಕೆಲಸವಿಲ್ಲದೇ ಕಾಲೂರಿ ಕುಳಿತಿದ್ದಾರೆ ಎಂದು ಸಕ್ಕರೆ ಹಾಗೂ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಿಡಿ ಕಾರಿದರು.

ಸೋಮವಾರ ಇಲ್ಲಿ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅವರ ಪರವಾಗಿ ನಡೆದ ಬೃಹತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಭೂಮಿಯ ಬುದ್ಧಿವಂತಿಕೆಯನ್ನು ಮತದಾರರೂ ಉಪಯೋಗಿಸಿಕೊಂಡು ಬಿಜೆಪಿಯ ಸಂಸದನನ್ನು ಮನೆಗೆ ಕಳಿಸಿ ಎಂದು ಹೇಳಿದರು.
ಕೇಂದ್ರ ಸರಕಾರ ನಮ್ಮಿಂದ ನಾಲ್ಕು ಲಕ್ಷ ಕೋಟಿಯಷ್ಟು ಜಿಎಸ್‌ಟಿ ಪಡೆಯುತ್ತದೆ. ಅದರಲ್ಲಿ ಪಾಲು ಕೊಡಲ್ಲ. ಒಬ್ಬ ಹೆಣ್ಣಮಗಳಾಗಿರುವ ಹಣಕಾಸು ಸಚಿವೆಗೆ ಕರುಣೆಯೇ ಇಲ್ಲ. ಅತಿ ಹೆಚ್ಚು ತೆರಿಗೆ ನೀಡುವ ನಮಗೆ ಅನ್ಯಾಯ ಮಾಡಲಾಗಿದೆ. ಇವತ್ತು ಸುಪ್ರೀಂ ಕೋರ್ಟ್ ಬರ ಪರಿಹಾರ ನೀಡಲು ತಾಕೀತು ಮಾಡಿರುವುದು ಇವರ ಬೇಜಾವ್ದಾರಿತನಕ್ಕೆ ಸಾಕ್ಷಿ ಎಂದರು.

ಮೋದಿಯವರ ಐವತ್ತಾರು ಇಂಚಿನ ಎದೆಯಲ್ಲಿ ರೊಕ್ಕವೇ ಇಲ್ಲ. ಇಲ್ಲಿನ ಇಬ್ಬರು ಸಂಸದರು ನಮ್ಮ ಬಗ್ಗೆ ದನಿಯೇ ಎತ್ತಿಲ್ಲ. ಒಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದರೆ ಆಲಮಟ್ಟಿಯಿಂದ ಸಂಪೂರ್ಣ ನೀರು ಸಿಗುವುದಕ್ಕೂ ಇವರು ನಿಲ್ಲಲಿಲ್ಲ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಅವಳಿ ಜಿಲ್ಲೆ ಚಿತ್ರಣ ಬದಲಾಗಿದೆ. ಜಿಲ್ಲೆಯ ಒಬ್ಬ ನಾಯಕ ಮಿತಿ ಮೀರಿ ಮಾತನಾಡುತ್ತಿದ್ದಾರೆ. ರಾಜಕಾರಣದಲ್ಲಿ ಹೀಗೆ ಎಂದೂ ಮಾತಾಡಿಲ್ಲ. ಇವರಿಗೆ ಮುಂದೆ ಉತ್ತರ ಕೊಡುತ್ತೇನೆ. ವಿಜಯಪುರದಲ್ಲಿ ಆಲಗೂರರನ್ನು ಗೆಲ್ಲಿಸಿದರೆ ಜೀತದಾಳಾಗಿ ದುಡಿಯಲಿದ್ದಾರೆ ಎಂದು ಹೇಳಿದರು.
ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಮಾತನಾಡಿ, ದೇಶವನ್ನು ಸ್ವಾವಲಂಬಿಯಾಗಿ ಕಟ್ಟಿದ್ದು ಕಾಂಗ್ರೆಸ್. ಸೂಜಿಯೂ ಉತ್ಪಾದನೆಯಾಗದ ದೇಶದಲ್ಲಿ ದೊಡ್ಡ ದೊಡ್ಡ ಕಾರಖಾನೆ, ಆಸ್ಪತ್ರೆ, ವಿಶ್ವವಿದ್ಯಾಲಯ, ಅಣೆಕಟ್ಟುಗಳನ್ನು ಕಟ್ಟಿದ್ದು ನಮ್ಮ ಪಕ್ಷ. ಮೋದಿಯವರು ಬಂದ ಮೇಲೆ ಎಲ್ಲ ಆಗಿದೆ ಎನ್ನುವುದು ಸುಳ್ಳು ಎಂದು ಹೇಳಿದರು.

ಬೆಲೆ ಏರಿಕೆಯಿಂದ ದೇಶ ಬಸವಳಿದಿದೆ. ಸಿಲಿಂಡರ್ ಸೇರಿ, ಉಣ್ಣುವ ಎಣ್ಣೆ ಎಲ್ಲ ತುಟ್ಟಿಯಾಗಿದೆ. ಉದ್ಯೋಗ ನೀಡಲಿಲ್ಲ, ರೈತರ ಏಳಿಗೆ ಬಯಸಲಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ನೋಟ್ ಬ್ಯಾನ್ ಮಾಡಿ ಕಷ್ಟ ಕೊಟ್ಟರು. ಯಾರ ಬದುಕನ್ನೂ ಕಟ್ಟಿಕೊಡಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಮಾಣಿಕ ಎಂದು ಇಮೇಜ್ ಸೃಷ್ಟಿಸಿಕೊಂಡಿದ್ದ ಮೋದಿಯವರ ಬಣ್ಣ ಚುನಾವಣಾ ಬಾಂಡ್‌ನಿಂದ ಬಯಲಾಯಿತು. ಸ್ವಿಸ್ ಬ್ಯಾಂಕಿನ ಹೆಸರೇಳುತ್ತಿದ್ದವರ ಬಂಡವಾಳ ಇದಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ. ನೀರಾವರಿ, ಪ್ರವಾಸೋದ್ಯಮ ಸೇರಿ ಉಳಿದೆಲ್ಲ ಪ್ರಗತಿಗೆ ಬದ್ಧರಿದ್ದೇವೆ ಎಂದು ಹೇಳಿದರು.

ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ ಮಾತನಾಡಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೆಲ್ಲ ರಾಜ್ಯ ಅಭಿವೃದ್ಧಿ ಕಂಡಿದೆ. ಬರಗಾಲ ಪೀಡಿತ ಜಿಲ್ಲೆ ಹಸಿರಾಗಿದೆ. ಸಚಿದ್ವಯರಿಂದ ಜಿಲ್ಲೆ ಅಭಿವೃದ್ಧಿ ಕಂಡಿದೆ. ಅದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಈಗಿರು ಸಂಸದ ನಿಷ್ಕ್ರಿಯರಾಗಿದ್ದಾರೆ. ಒಂದು ರೈಲು ಆರಂಭಿಸಲು ಪತ್ರ ಬರೆದಿದ್ದಕ್ಕೆ ಉತ್ತರ ಕೊಡುವ ಸೌಜನ್ಯ, ಜವಾಬ್ದಾರಿ ಕೂಡ ಅವರಿಗೆ ಇಲ್ಲ. ಇಂತಹವರಿಗೆ ಅಧಿಕಾರ ಕೊಟ್ಟು ಏನುಪಯೋಗ. ಆಲಗೂರರಿಗೆ ಮತ ನೀಡಿದರೆ ಇವರಿಗೆ ಕೇಳಿ ಕೆಲಸ ಮಾಡಿಕೊಳ್ಳಬಹುದು ಎಂದರು.

ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ನಮ್ಮದು ಸೌಹಾರ್ದತೆಯ ಭಾರತ. ನಮ್ಮ ಹಬ್ಬವಾದ ದಿವಾಲಿಯಲ್ಲಿ ಅಲಿ ಇದ್ದಾನೆ, ರಜ್ಮಾನ್‌ನಲ್ಲಿ ರಾಮನಿದ್ದಾನೆ. ಹೀಗಿದ್ದ ನಮ್ಮನ್ನು ಬಿಜೆಪಿ ಒಡೆದಾಳುತ್ತಿದ್ದಾರೆ. ಲಂಬಾಣಿ ಸಮುದಾಯವನ್ನು ಅವಮಾನಿಸುತ್ತದೆ. ಕುರುಬರಿಗೆ ಒಂದೂ ಟಿಕೆಟ್ ನೀಡಿಲ್ಲ. ಇದು ಅವರ ಮನಸ್ಥಿತಿ ಎಂದು ಹೇಳಿದರು. ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಮಾತನಾಡಿ, ಬಿಜೆಪಿಯ ಮೋದಿಯವರು ಹೇಳಿದಂತೆ ನಡೆದಿಲ್ಲ. ಅವರ ಎಲ್ಲ ಗ್ಯಾರಂಟಿಗಳು ಸುಳ್ಳಾಗಿವೆ, ನಮ್ಮವು ಜನರ ಮನೆ ಬಾಗಿಲು ಮುಟ್ಟಿವೆ ಎಂದರು.

ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಬಿಜೆಪಿಯವರಿಗೆ ಯಾವ ನೈತಿಕ ಹಕ್ಕಿಲ್ಲ. ಜೆಡಿಎಸ್ ಪಕ್ಷ ಮೂಲೆ ಸೇರಿದೆ. ಈಗ ಮೋದಿಯ ಮೋಡಿಯ ಮಾತುಗಳು ನಡೆಯುವುದಿಲ್ಲ. ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸುಮ್ಮನೆ ಕೂಡದೆ ದೇಶಕ್ಕಾಗಿ ಒಳ್ಳೆಯ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.

ಅಭ್ಯರ್ಥಿ ರಾಜು ಆಲಗೂರ ಅವರು ಮಾತನಾಡಿ, ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆದಿರುವ ಚುನಾವಣೆ. ಸುಳ್ಳು ಹೇಳಿ ಅಧಿಕಾರದಲ್ಲಿರುವ ಮತ್ತು ಸತ್ಯದ ಪರವಿರುವ ಪಕ್ಷಗಳ ಮಧ್ಯದ ಹೋರಾಟವಿದು. ಸಂವಿಧಾನಗಳ ಹಕ್ಕನ್ನು ಕಸಿಯಲಾಗಿದೆ. ಇಡಿ, ಐಟಿ ಮುಖಾಂತರ ಬೆದರಿಸಲಾಗುತ್ತಿದೆ. ಈ ಸಲ ಮೋದಿ ಗೆದ್ದರೆ ಮುಂದೆ ಚುನಾವಣೆಯೇ ನಡೆಯುವುದಿಲ್ಲ. ಹಾಗಾಗಿ ಅಭಿವೃದ್ಧಿ, ಪ್ರಜಾಪ್ರಭುತ್ವದ ಪರವಾಗಿರುವ ಪಕ್ಷಕ್ಕೆ ಮತ ನೀಡಿ ದೇಶ ಕಾಪಾಡಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ನಮ್ಮದೇ ಶಾಸಕರಿದ್ದು, ಸಂಸತ್‌ನಲ್ಲೂ ನಾವಿದ್ದರೆ ಸಂಪೂರ್ಣ ನೀರಾವರಿ ಸೇರಿ ಉಳಿದೆಲ್ಲ ಪ್ರಗತಿ ಸಾಧ್ಯ ಎಂದರು.

ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಈ ಕೆಟ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ಬಸವನ ನಾಡಿನಿಂದ ಬದಲಾವಣೆ ಶುರುವಾಗಬೇಕು. ರಾಹುಲ್ ಗಾಂಧಿಯವರ ಕೈ ಬಲಪಡಿಸಬೇಕು. ದೇಶವನ್ನು ಅಧೋಗತಿಗೆ ತಂದಿರುವವರು ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾರರನ್ನು ಹೀಗಳೆಯುವುದರಲ್ಲೇ ಕಾಲ ಹಾಕಿದ್ದಾರೆ. ಜಿಗಜಿಣಗಿಯವರು ತಮ್ಮ ಅಥರ್ಗಾ ಗ್ರಾಮದ ಹೆಣ್ಣುಮಕ್ಕಳಿಗೇ ಶೌಚಾಲಯ ಕಟ್ಟಿಸಿಕೊಟ್ಟಿಲ್ಲ ಇನ್ನು ಬೇರೆ ಏನು ಮಾಡುತ್ತಾರೆ. ದೇಶದಲ್ಲಿ ಒಕ್ಕಲುತನ ಮಾಡುವವರ ಸ್ಥಿತಿ ಗಂಭೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುದ್ದೇಬಿಹಾಳ ಶಾಸಕ, ಸಾಬೂನು ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರು ಮಾತನಾಡಿ, ದೇಶ ಮತ್ತು ರಾಜ್ಯದ ಸಂಬಂಧ ಸರಿ ಇಲ್ಲದಿದ್ದರೆ ಅಪಯಾಕಾರಿ. ಎಲ್ಲ ವರ್ಗದ ಜನ ಈ ಸೂಕ್ಷ್ಮ ವಿಚಾರ ಆಲಿಸಿ ಮತ ನೀಡಬೇಕು. ನಮಗೆ ನೀಡಬೇಕಾದ ಪಾಲನ್ನು ಕೇಂದ್ರ ನೀಡಿಲ್ಲ, ಬರಗಾಲಕ್ಕೆ ಸ್ಪಂದಿಸಿಲ್ಲ. ರೈತರಿಗೆ ಕೇಂದ್ರ ಪರಿಹಾರದ ಪಾಲು ನೀಡಿದ್ದರೆ ಅದಕ್ಕೆ ರಾಜ್ಯ ಸರಕಾರದ್ದೂ ಸೇರಿಸಿ ಕನಿಷ್ಠ ಎಂಟು-ಹತ್ತು ಸಾವಿರ ರೂ. ಎಲ್ಲರಿಗೂ ಬರುತಿತ್ತು. ಇದಾಗದಿರುವುದರಿಂದ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಯಿತು. ಬರುವ ಶನಿವಾರದೊಳಗೆ ಪರಿಹಾರ ನೀಡಿ ಎಂದು ಕೋರ್ಟ್ ಹೇಳಿದೆ. ಇವರಿಗೆ ನಾಚಿಕೆ ಏನಾದರೂ ಇದೆಯಾ ಎಂದು ಕೇಳಿದರು.

ಎಂ.ಬಿ. ಪಾಟೀಲರು ಕೇಳಿದ ನೀರಿನ ಹಂಚಿಕೆ ನೋಟಿಫೈ ಇನ್ನೂ ಮಾಡಿಲ್ಲ. ಕೇಂದ್ರ ಸರಕಾರ ರಾಜ್ಯದಲ್ಲಿ ನೀರಾವರಿ ಯೋಜನೆ ಆಗಬಾರದು ಎನ್ನುವಂತಿದೆ ಎಂದು ಟೀಕಿಸಿದ ನಾಡಗೌಡರು, ಇದೆಲ್ಲದಕ್ಕೆ ಪ್ರಶ್ನೆ ಮಾಡಲು ನಮ್ಮ ಸಂಸದರು ಆರಿಸಿ ಬರಬೇಕು ಎಂದರು.
ಎಐಸಿಸಿ ವೀಕ್ಷಕರಾದ ಸಯ್ಯದ್ ಬುರುನುದ್ದೀನ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಜಯಪುರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶೇಖರಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ನಾಯಕ, ರುಕ್ಸಾನಾ ಉಸ್ತಾದ, ಎ.ಎಂ.ಪಾಟೀಲ, ಶಿವನಗೌಡ ಗುಜಗೊಂಡ, ಸುರೇಶ ಹಾರಿವಾಳ ಅನೇಕರಿದ್ದರು.

ರಾಮನ ಹೆಸರು ಹೇಳಿ ಊಟ ಪಡೆಯಿರಿ, ಓಟಲ್ಲ!
ರಾಮನ ಹೆಸರು ಹೇಳಿ ಊಟ ಕೇಳಿದ್ದರೆ ನಡೆಯುತ್ತಿತ್ತು. ಆದರೆ ಇವರು ಓಟು ಕೇಳುತ್ತಿರುವುದು ಅನ್ಯಾಯ ಎಂದು ಸಚಿವ ಶಿವಾನಂದ ಪಾಟೀಲ ವಾಗ್ದಾಳಿ ನಡೆಸಿದರು.
ಮೋದಿಯವರು ರಾಮನ ಹೆಸರು ಹೇಳಿದರೆ, ರಾಜ್ಯದ ನಾಯಕರು ಮೋದಿ ಹೆಸರು ಹೇಳುತ್ತಿದ್ದಾರೆ. ಯಾಕೆ ಇವರಲ್ಲಿ ಸ್ವಂತ ಶಕ್ತಿ ಇಲ್ಲವೇ? ನಿಮ್ಮಲ್ಲಿ ತಾಕತ್ತಿದ್ದರೆ ನಿಮ್ಮ ಮುಖ ಹಾಗೂ ಕೆಲಸಗಳ ಆಧಾರದ ಮೇಲೆ ಮತ ಕೇಳಿ ಎಂದು ಸವಾಲು ಹಾಕಿದರು.
ಹುಬ್ಬಳ್ಳಿಯ ನೇಹಾಳ ಹೆಸರು ಹೇಳಿ ಮತ ಕೇಳುವ ಮಟ್ಟಕ್ಕೆ ಈ ಬಿಜೆಪಿಯವರು ಬಂದಿದ್ದಾರೆ. ಅದನ್ನೇ ಪ್ರಚಾರ ಮಾಡಲಾಗುತ್ತದೆ ಎಂದು ಟೀಕಿಸಿದರು.

ವಿಜಯಪುರದಲ್ಲಿ ಯತ್ನಾಳ ವಿರುದ್ಧ ಸ್ಪರ್ಧಿಸುವೆ: ಶಿವಾನಂದ ಪಾಟೀಲ
ಈ ಲೋಕಸಭೆ ಚುನಾವಣೆ ನಂತರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಸ್ಪರ್ಧಿಸುವೆ. ಒಂದೇ ಒಂದು ಮತ ನನಗೆ ಕಡಿಮೆ ಬಿದ್ದರೆ ನಾನು ರಾಜಕೀಯದಿಂಲೇ ನಿವೃತ್ತಿಯಾಗುವೆ. ಧೈರ್ಯವಿದ್ದರೆ ಯತ್ನಾಳ ಸ್ಪರ್ಧಿಸಲಿ ಎಂದು ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು