ಬೆಳಗಾವಿ: ತಾಯಿ, ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಶಹಾಪುರದ ಜೋಷಿ ಮಾಳ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ವಿಷ ಸೇವನೆಗೆ ಒಳಗಾಗಿರುವ ಇನ್ನೋರ್ವ ಪುತ್ರಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳಾ ಕುರಡೇಕರ್ (70), ಅವರ ಪುತ್ರ ಸಂತೋಷ ಕುರಡೇಕರ್ (44), ಪುತ್ರಿ ಸುವರ್ಣ ಕುರಡೇಕರ್ (42) ಮೃತಪಟ್ಟವರು. ಇನ್ನೋರ್ವ ಪುತ್ರಿ ಸುನಂದಾ ಕುರಡೇಕರ್ (20) ವಿಷ ಸೇವಿಸಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.