ಬೆಳಗಾವಿ: ವಿಧವೆ ಮೇಲಿನ ಮೋಹಕ್ಕೆ ಪಾಪಿ ಪತಿಯೊಬ್ಬ ದೇವಿ ಪ್ರಸಾದವೆಂದು ಹೇಳಿ ಪತ್ನಿಗೆ ಇಲಿ ಪಾಷಾಣ ಕುಡಿಸಿ ಕೊಲೆಗೈದಿರುವ ಘಟನೆ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ನಡೆದಿದೆ.

ಸಕ್ಕುಬಾಯಿ ಬಲಿಯಾದ ಮಹಿಳೆ. ಪತಿ ಸಂತೋಷ ಪಟಾಯತ್ ಕೊಲೆ ಮಾಡಿದ ಪತಿ. ಅಧಿಕ ಮಾಸವಿದೆ ಎಂದು ದಂಪತಿ ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲಕ್ಕೆ ಹೋಗಿದ್ದರು. ದೇವಾಸ್ಥಾನದಿಂದ ಹಿಂತಿರುಗುವಾಗ ತಂಪುಪಾನೀಯದಲ್ಲಿ ಸಂತೋಷ್ ಇಲಿ ಪಾಷಾಣ ಹಾಗೂ ಬಳೆ ಚೂರು ಬೆರೆಸಿ ದೇವಿ ಪ್ರಸಾದ ಎಂದು ಹೆಂಡತಿಗೆ ಕುಡಿಯಲು ಕೊಟ್ಟಿದ್ದಾನೆ.

ಪತಿಯ ಮಾತನ್ನು ನಂಬಿ ಇಲಿ ಪಾಷಾಣ ಕುಡಿದ ಸಕ್ಕುಬಾಯಿ ನಡುರಸ್ತೆಯಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಈ ವೇಳೆ ಪತಿ ಆಕೆಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಇಷ್ಟೆಲ್ಲಾ ಆದ ಬಳಿಕ ಕೊಲೆಯನ್ನ ಅಪಘಾತ ಎಂದು ಬಿಂಬಿಸಲು ಬೈಕ್ ಅನ್ನೇ ಪತ್ನಿ ಮೇಲೆ ಎತ್ತಿ ಹಾಕಿದ್ದಾನೆ.

ಬಳಿಕ 2-3 ಗಂಟೆಗಳ ರಸ್ತೆ ಪಕ್ಕ ಹೈಡ್ರಾಮಾ ಮಾಡಿದ್ದಾನೆ. ಯಾರೂ ಗಮನಿಸದಿದ್ದಾಗ ಸ್ವತಃ ತಾನೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಈ ವೇಳೆ ಸಕ್ಕುಬಾಯಿ ಮೃತದೇಹ ನೋಡಿದ ಪೊಲೀಸರಿಗೆ ಅನುಮಾನ ಬಂದಿದೆ. ಈ ಹಿನ್ನೆಲೆ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದು ಅಪಘಾತವಲ್ಲ ಕೊಲೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಸಂತೋಷನನ್ನ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ವೇಳೆ ಸಂತೋಷ ತನ್ನ ಪ್ರೇಯಸಿ ಜೊತೆಗೆ ಜೀವನ ನಡೆಸಲು ಪತ್ನಿಯನ್ನು ಕೊಂದಿರುವುದಾಗಿ ಬಾಯಿಬಿಟ್ಟಿದ್ದಾನೆ. 9 ವರ್ಷಗಳ ಹಿಂದೆ ಈತ ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಸಕ್ಕುಬಾಯಿ ಜೊತೆಗೆ ವಿವಾಹವಾಗಿದ್ದ. ಕಳೆದ 4 ವರ್ಷಗಳಿಂದ ಸಂತೋಷ ವಿಧವೆ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಪ್ರೇಯಸಿ ಜೊತೆ ಜೀವನ ಕಳೆಯಲು ಪತ್ನಿಯನ್ನೇ ಕೊಂದ ಸಂತೋಷ ಹಿಂಡಲಗಾ ಜೈಲುಪಾಲಾಗಿದ್ದಾನೆ. ಕೃತ್ಯದಲ್ಲಿ ಆತನ ಪ್ರೇಯಸಿ ವಿಧವೆ ಪಾತ್ರವೇನಾದರೂ ಇದೆಯಾ ಎಂಬ ಅನುಮಾನದಿಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.