ಬೆಳಗಾವಿ : ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಶನಿವಾರ ಕರದಂಟುನಗರಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಅಕ್ಷರಶಃ ಜಲದಿಗ್ಧಂಧನಕ್ಕೆ ಒಳಗಾಗಿದೆ. ನಗರದ ಶೇ.40ಕ್ಕೂ ಹೆಚ್ಚು ಭಾಗ ಜಲಾವೃತಗೊಂಡಿದೆ. ಘಟಪ್ರಭಾ ನದಿಗೆ 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಗೋಕಾಕ್‌ನ ಹಳೇ ದನಗಳ ಪೇಟೆ, ಡೋರ ಓಣಿ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಸಿಂದಿ ಕೂಟದಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 12ಕ್ಕೂ ಅಧಿಕ ಕೈಗಾರಿಕೆಗಳಿಗೆ ನೀರು ನುಗ್ಗಿದೆ. ಗೋಕಾಕ್‌ನ ಸರ್ಕಾರಿ ಪಪೂ ಮಹಾವಿದ್ಯಾಲಯ ಹಾಗೂ ಎಪಿಎಂಸಿಯಲ್ಲಿ ಎರಡು ಕಾಳಜಿ ಕೇಂದ್ರ ತೆರೆಯಲಾಗಿದ್ದು, 155 ಕುಟುಂಬಗಳ 550 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ನೀರು ನುಗ್ಗಿದ್ದು, ನೂರಾರು ಜನ ಮನೆಗಳನ್ನು ತೊರೆದಿದ್ದಾರೆ.

