ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ ನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಪಾದನೆ ಮಾಡುವವರು ಮೊದಲು ಶುದ್ಧಹಸ್ತರಿರಬೇಕು. ಆವಾಗ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್ ನವರು ದಿಂಬು ಹಾಸಿಗೆಯನ್ನೂ ಬಿಟ್ಟಿಲ್ಲ. ಬಿಸ್ಕೇಟ್ , ಕಾಫಿಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ. ಕಾಂಗ್ರೆಸ್ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ತಮ್ಮನಿವಾಸದ ಬಳಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪಗೆ ಕೇಳಬೇಕು. ಸಿದ್ಧರಾಮಯ್ಯ ಎಷ್ಟೆಲ್ಲ ಟಾರ್ಗೇಟ್ ಕೊಟ್ಟಿದ್ರು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದ್ರೆ ನಡೆಯಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ ಎರಡಾ ? ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ ಎಂದರು.
ಬೆಳಗಾವಿ ರಾಜಹಂಸಗಡದಲ್ಲಿ ಕಾಂಗ್ರೆಸ್ ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ. ಸರ್ಕಾರದಿಂದ ಉದ್ಘಾಟನೆ ಮಾಡಿದ ನಂತರ ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಲಾಗಿದೆ. ರಾಷ್ಟ್ರನಾಯಕರ ಹೆಸರಲ್ಲಿ ಈ ರೀತಿ ರಾಜಕೀಯ ಮಾಡೋದು ಸರಿಯಲ್ಲ.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಐಎಸ್ ಕೆಪಿ ಹೊಣೆಹೊತ್ತ ವಿಚಾರಕ್ಕೆ ಈಗ ಡಿಕೆಶಿ ಏನು ಹೇಳ್ತಾರೆ ಕೇಳಬೇಕು. ಬರೀ ಸಾಧಾ ಕುಕ್ಕರ್ ಅಂತಾ ಡಿಕೆಶಿ ಹೇಳಿದ್ರು. ಬಿಜೆಪಿಯವರು ಇದರ ದುರುಪಯೋಗಮಾಡಿಕೊಳ್ಳುತ್ತಿದ್ದಾರೆ ಅಂತಾ ಹೇಳಿದ್ರು, ಈಗ ಈ ವಿಚಾರಕ್ಕೆ ಡಿಕೆಶಿ ಏನು ಹೇಳ್ತಾರೆ ಪ್ರಶ್ನೆ ಕೇಳಿ ಎಂದು ತಿರುಗೇಟು ನೀಡಿದರು.