ಬೆಳಗಾವಿ: ಕೊಲೆ ಆರೋಪಿ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದು, ದರ್ಶನ್&ಗ್ಯಾಂಗ್‌ಗೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ.
ಹೀಗಾಗಿ ದರ್ಶನ್ ಮತ್ತು ಗ್ಯಾಂಗ್ ಅನ್ನು ನಟೋರಿಯಸ್ ಕೈದಿಗಳು ಇರುವ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಕೊಲೆ ಆರೋಪಿ, ಕಿಲ್ಲಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜಾಲಿ ಲೈಫ್ ನಡೆಸುತ್ತಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿರುವ ಫೋಟೋ ಮತ್ತು ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಪರಪ್ಪನ ಅಗ್ರಹಾರದ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ದರ್ಶನ್ ಹಾಗೂ ಗ್ಯಾಂಗ್‌ಗೆ ಸಂಕಷ್ಟ ಎದುರಾಗಿದೆ. ಹಿಂಡಲಗಾ ಜೈಲಿನ `ಅಂಧೇರಿ’ ಸೆಲ್‌ಗಳಿಗೆ ಈ ಗ್ಯಾಂಗ್ ಶಿಫ್ಟ್ ಆಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಗಲ್ಲಿಗೇರಿಸುವ ಏಕೈಕ ಜೈಲು ಎಂದರೆ ಬೆಳಗಾವಿ ಹಿಂಡಲಗಾ ಜೈಲು. ನಟೋರಿಯಸ್ ಕೈದಿಗಳನ್ನು ಇಡಲು 36 ಕತ್ತಲು ಕೋಣೆಯ ವ್ಯವಸ್ಥೆ ಬೆಳಗಾವಿ ಜೈಲಿನಲ್ಲಿದೆ. ಅದರಲ್ಲಿ 15 ಕೋಣೆಗಳು ಖಾಲಿ ಇದೆ. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಹಿಂಡಲಗಾ ಜೈಲಿಗೆ ದರ್ಶನ್ ಅಥವಾ ಗ್ಯಾಂಗ್ ಶಿಫ್ಟ್ ಮಾಡಿದರೆ ಆಗುವ ಸಾಧಕಬಾಧಕ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಈ ಮಧ್ಯೆ ಜೈಲಿನಲ್ಲಿನ ಸೆಕ್ಯುರಿಟಿ ಕುರಿತು ಕೂಡ ಮಾಹಿತಿ ಪಡೆದುಕೊಳ್ಳಲಾಗಿದೆ.

