ಬೆಳಗಾವಿ : ಬಿಜೆಪಿ ಸ್ನೇಹಿತರು ದೇವರು, ಧರ್ಮವನ್ನು ತಮ್ಮ ಆಸ್ತಿ ಎಂದು ಭಾವಿಸಿದ್ದಾರೆ, ಧರ್ಮ ಯಾವುದಾದರೂ ತತ್ವ ಒಂದೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುಡುಗಿದರು.

ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ಪುಣ್ಯಕ್ಷೇತ್ರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಈ ವಿಚಾರ ನಾನು ಹಲವು ಬಾರಿ ಹೇಳುತ್ತಿರುತ್ತೇನೆ. ಬಿಜೆಪಿಯವರು ಸದಾ ಧರ್ಮದಲ್ಲಿ ರಾಜಕಾರಣ ಮಾಡುತ್ತಿರುತ್ತಾರೆ ಎಂದು ಕುಟುಕಿದರು.

ಕಾಂಗ್ರೆಸ್ ಸರ್ಕಾರ ಮುಜರಾಯಿ ಇಲಾಖೆ ಮೂಲಕ ನಮ್ಮ ದೇವಾಲಯಗಳು ಹಾಗೂ ಧರ್ಮ ರಕ್ಷಣೆ ಮಾಡಿಕೊಂಡು ಬಂದಿದೆ. ಧರ್ಮ ಯಾರೊಬ್ಬರ ಸ್ವತ್ತೂ ಅಲ್ಲ. ಧರ್ಮ ಅವರವರ ವೈಯಕ್ತಿಕ ವಿಚಾರ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವರೊಬ್ಬ ನಾಮ ಹಲವು. ನೀವು ಯಾವುದೇ ದೈವವನ್ನು ಆರಾಧಿಸಿ ಧರ್ಮ ಪಾಲನೆ ಮಾಡಬಹುದು ಎಂದರು.