ಬೆಳಗಾವಿ: 50ಕ್ಕೂ ಅಧಿಕ ಮಂದಿಯಿಂದ ಓರ್ವನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ ಘಟನೆ ಬೆಳಗಾವಿಯ ಸುವರ್ಣಸೌಧದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಕ್ರಮ ಗೋವುಗಳ ಸಾಗಾಟ ಆರೋಪದ ಮೇಲೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಲಾರಿಯಲ್ಲಿ ಸುಮಾರು 12ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ವಿಷಯ ತಿಳಿದ ಹಿಂದೂಪರ ಸಂಘಟನೆಯ 50ಕ್ಕೂ ಅಧಿಕ ಯುವಕರು ಬೆಳಗಾವಿ ಹೊರವಲಯದ ಸುವರ್ಣಸೌಧದ ಬಳಿ ಲಾರಿ ತಡೆದು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ.
ಲಾರಿ ಚಾಲಕನ ಜೊತೆ ವಾಗ್ವಾದ ನಡೆದಿದ್ದು, ಉದ್ರಿಕ್ತರ ಗುಂಪು ಲಾರಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಮಾಡಿದ್ದಾರೆ. ಇದೇ ವೇಳೆ ಚಾಲಕನ ಮೇಲೆ ಹಲ್ಲೆಯನ್ನೂ ನಡೆಸಲಾಗಿದೆ.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಏನೆಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತನಿಖೆಗೆ ಮುಂದಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಚಾಲಕ ಹಾಗೂ ಆತನ ಜೊತೆಗಿದ್ದ ಇನ್ನೋರ್ವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.