ಬಳ್ಳಾರಿ: ಇಲ್ಲಿಯ ಕೋಟೆ ಜನವಸತಿ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸೇತುವೆ ಮುಳುಗಡೆ ಭೀತಿ ಎದುರಾಗಿದೆ.
ಸದ್ಯ ಮುಂಜಾಗ್ರತೆಯಾಗಿ ಕಂಪ್ಲಿ- ಗಂಗಾವತಿ ಸೇತುವೆ ಬಂದ್ ಮಾಡಲಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಅದರಿಂದ ಕಲ್ಯಾಣ, ಉತ್ತರ ಮತ್ತು ಮಧ್ಯ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ.
ಕಂಪ್ಲಿಯಿಂದ ಗಂಗಾವತಿಗೆ ನಿತ್ಯ ತೆರಳುವ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಮುಖ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವ ರೋಗಿಗಳು, ವಾಣಿಜ್ಯ ವ್ಯವಹಾರಗಳಿಗೆ ತೆರಳುವವರು ವಿಜಯನಗರ ಜಿಲ್ಲೆಯ ಬುಕ್ಕಸಾಗರ ಗ್ರಾಮದ ಬಳಿಯ ಕಡೆಬಾಗಿಲು ಸೇತುವೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ತಲೆದೋರಿದೆ. ನದಿ ಬಳಿ ಮೀನುಗಾರರ ಅನೇಕ ಕುಟುಂಬಗಳು ವಾಸಿಸುತ್ತಿದ್ದು, ನೀರಿನ ಪ್ರಮಾಣ ಹೆಚ್ಚಾದಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ.

