ಬಳ್ಳಾರಿ: ವಿದ್ಯುತ್ ಕಂಬದಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ಮೇವು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ದೌಲತ್‌ಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಗ್ರಾಮದ ಬಕ್ಷಿ ಸಾಬ್ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣವಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಿರುಗಾಳಿಯ ಪರಿಣಾಮ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಸಂಪೂರ್ಣ ಬಣವಿಯನ್ನು ಆವರಿಸಿದೆ. ಪರಿಣಾಮ ಮೇವು ಸಂಪೂರ್ಣ ನಾಶವಾಗಿ ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ, ಗಾಳಿಯ ವೇಗದಿಂದ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ರೈತನ ನಷ್ಟವನ್ನು ಮೌಲ್ಯಮಾಪನ ಮಾಡಿ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರ ಹಾಗೂ ಸಂಬಂಧಿತ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು ಮತ್ತು ಮಾರ್ಗಗಳ ಸುರಕ್ಷತೆ ಕುರಿತು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.