ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳು (JCTU) ಹಾಗೂ ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ (SKM)ಗಳ ಜಂಟಿ ನೇತೃತ್ವದಲ್ಲಿ ಮಧ್ಯಮ ವರ್ಗದ ನೌಕರರ ಸಂಘಟನೆಗಳ ಸಹಕಾರದೊಂದಿಗೆ ಜುಲೈ 9ರಂದು ಅಖಿಲ ಭಾರತ ಮಹಾಮುಷ್ಕರವು ನಡೆಯಲಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ಇದರಿಂದಾಗಿ ಇನ್ನು ಮುಂದೆ ಭಾರತದ 70% ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಸಂಘ ಕಟ್ಟುವ ಹಕ್ಕು, ಬೇಡಿಕೆಯ ಹಕ್ಕು, ಒಪ್ಪಂದ ಏರ್ಪಡಿಸುವ ಹಕ್ಕು ಹಾಗೂ ಕಾರ್ಮಿಕರ ಸಾಮೂಹಿಕ ಚೌಕಾಸಿಯ ಬೆನ್ನೆಲುಬಾಗಿದ್ದ ಮುಷ್ಕರದ ಹಕ್ಕನ್ನು ಕೂಡಾ ನಿರಾಕರಿಸಲಾಗಿದೆ.

ಕೆಲಸದ ಅವಧಿಯನ್ನು 8 ಗಂಟೆಯಿAದ 12 ಗಂಟೆಗೆ ಹೆಚ್ಚಿಸಲು ಹಾಗೂ ಓವರ್ ಟೈಮ್ (ಔಖಿ)ನ್ನು 3 ತಿಂಗಳಿಗೆ 50 ಗಂಟೆ ಇದ್ದುದ್ದು ಈಗ 125 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಲು ಈ ಸಂಹಿತೆಗಳಲ್ಲಿ ತಿದ್ದುಪಡಿ ತರಲಾಗಿದೆ. ಸಾಮೂಹಿಕ ಭದ್ರತೆಯ ಭಾಗವಾಗಿ ನಿವೃತ್ತಿಯಾದ ಕಾರ್ಮಿಕರಿಗೆ ಕನಿಷ್ಠ 9000 ರೂ ನಿವೃತ್ತಿ ವೇತನ ನೀಡುವ ಬದಲಿಗೆ ಇಎಸ್‌ಐ ಮತ್ತು Pಎಫ್‌ನ ಆಯ್ಕೆಯ ಸ್ವಾತಂತ್ರ್ಯವನ್ನು ಮಾಲೀಕರಿಗೆ ನೀಡಲಾಗಿದೆ. ILO ಒಡಂಬಡಿಕೆಗಳಿಗೂ ತಿಲಾಂಜಲಿ ನೀಡಿILOಯನ್ನು ಕಡೆಗಣಿಸುವ ಮುಖಾಂತರ ಮೋದಿ ಸರ್ಕಾರ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿನ ಕಾರ್ಪೊರೇಟ್ ಬಂಡವಾಳಗಾರರ ಮಿಗುತಾಯ ಮೌಲ್ಯವನ್ನು ಹೆಚ್ಚಿಸಲು ಕಾರ್ಮಿಕರ ಬೆನ್ನಮೂಳೆಯನ್ನು 4 ಸಂಹಿತೆಗಳ ಮುಖಾಂತರ ಮುರಿಯಲಾಗುತ್ತಿದೆ. ಮತ್ತೊಂದೆಡೆ ತೆರಿಗೆಗಳ ಭಾರ ಮತ್ತು ಬೆಲೆಯೇರಿಕೆಯಿಂದ ಭಾರತದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದೆ.

ದೇಶದ ಸಂಪತ್ತಿನ ಸೃಷ್ಟಿಕರ್ತರಾದ ಕಾರ್ಮಿಕರನ್ನು ರಕ್ಷಿಸುವ ಮುಖಾಂತರ, ದೇಶದ ಸಂಪತ್ತಿನ ಲೂಟಿಯನ್ನು ತಡೆಯಲು ಮತ್ತು ಕೆಳಕಂಡ ಬೇಡಿಕೆಗಳಿಗಾಗಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚ್ ಕರೆಯ ಮೇರೆಗೆ ಜುಲೈ 9 ರಂದು ಕಾರ್ಮಿಕ ವರ್ಗ ನಡೆಸಲಿರುವ ಅಖಿಲ ಭಾರತ ಮುಷ್ಕರವನ್ನು ದ.ಕ. ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ವಿವಿಧ ವಿಭಾಗಗಳ ಕಾರ್ಮಿಕರು, ಜನಸಾಮಾನ್ಯರು ಹಾಗೂ ಸಾರ್ವಜನಿಕ ಬಂಧುಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.

ಅಂದು (09-07-2025) ಬೆಳಿಗ್ಗೆ 10ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ (ಜ್ಯೋತಿ ವೃತ್ತ)ನಿಂದ ಕಾರ್ಮಿಕರ ಮೆರವಣಿಗೆ ಹೊರಡಲಿದ್ದು, ಬಳಿಕ 10.30ಕ್ಕೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಸಭೆಯು ಜರಗಲಿದೆ. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬೇಡಿಕೆಗಳು:
* 8 ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು, ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು.
* ಬೆಲೆ ಏರಿಕೆಗೆ ಅನುಗುಣವಾಗಿ ಎಲ್ಲಾ ವಿಭಾಗಗಳ ಕಾರ್ಮಿಕರಿಗೆ ರಾಷ್ಟ್ರ ವ್ಯಾಪ್ತಿ 26 ಸಾವಿರ ಹಾಗೂ ರಾಜ್ಯವ್ಯಾಪಿ 36 ಸಾವಿರ ಕನಿಷ್ಟ ವೇತನ ನಿಗದಿಪಡಿಸಬೇಕು.

* ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು.
* ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಮನೆಕೆಲಸಗಾರರು, ಗಿಗ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್, ಫರ್, ಮೆಕಾನಿಕ್ಸ್, ಬೀಡಿ-ಅಗರಬತ್ತಿ, ಹೆಂಚು ಕಾರ್ಮಿಕರು, ಮೀನುಗಾರರು, ಇನ್ನಿತರ ಎಲ್ಲಾ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟ ಕಾರ್ಮಿಕರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಟ ಮಾಸಿಕ ರೂ. 9.000/- ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು.

* ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪೆನ್ಶನ್ ಸೀಂ ನ್ನು ಮರುಸ್ಥಾಪಿಸಬೇಕು.
* ಇಎಸ್‌ಐ, ಪಿ.ಎಫ್. ಬೋನಸ್ ಪಾವತಿಗಿರುವ ಎಲ್ಲಾ ವೇತನ ಮಿತಿಯನ್ನು ತೆಗೆಯಬೇಕು. ಗ್ರಾಚ್ಯುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸಬೇಕು.
* ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಆಹಾರ, ಔಷಧಿಗಳು, ಕೃಷಿ ಸಾಮಾಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು.
* ಸಾರ್ವಜನಿಕ ಉದ್ದಿಮೆ, ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಿಸುವ ‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ’ಯನ್ನು ರದ್ದು ಪಡಿಸಬೇಕು.

* ವಿದ್ಯುತ್ ತಿದ್ದುಪಡಿ ಮಸೂದೆ-2022 ವಾಪಸ್ಸು ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು.
* ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು, ಖಾಲಿಯಿರುವ ಹುದ್ದೆಗಳ ಭರ್ತಿ ಮಾಡಬೇಕು. ಉದ್ಯೋಗ ಸೃಷ್ಟಿ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸ, ದಿನಕ್ಕೆ ರೂ. 600 ಕೂಲಿ ನಿಗದಿಪಡಿಸಬೇಕು. ನಗರ ಪ್ರದೇಶಕ್ಕೂ ವಿಸ್ತರಿಸಬೇಕು.
* ದೇಶದ ಅತೀ ದೊಡ್ಡ ಶ್ರೀಮಂತರ ಆಸ್ತಿ ಮೇಲೆ ಸಂಪತ್ತು ತೆರಿಗೆ, ಉತ್ತರಾಧಿಕಾರತ್ವ ತೆರಿಗೆ ವಿಧಿಸಬೇಕು. ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು.

* ಸಂವಿಧಾನದ ಆಶಯಗಳ ಮೇಲಿನ ದಾಳಿ ನಿಲ್ಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು, ಸಮಾನತೆ ಮತ್ತು ಒಕ್ಕೂಟ ತತ್ವವನ್ನು ರಕ್ಷಿಸಬೇಕು.
* ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿ ಕಾರ್ಖಾನೆ ಕಾಯ್ದೆಗೆ ಮಾಡಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸುನಿಲ್‌ಕುಮಾರ್ ಬಜಾಲ್ (CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಸೀತಾರಾಮ ಬೆರಿಂಜ ಕೆ. (AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ), ಫಣೀಂದ್ರ ಕೆ (ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬ್ಯಾಂಕ್ ನೌಕರರ ಸಂಘಟನೆ), ಯಾದವ ಶೆಟ್ಟಿ (AIKS ಜಿಲ್ಲಾ ಅಧ್ಯಕ್ಷರು) ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ (ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ) ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆ. ಬಾಲಕೃಷ್ಣ ಶೆಟ್ಟಿ (CITU ದ.ಕ. ಜಿಲ್ಲಾಧ್ಯಕ್ಷರು), ಕರುಣಾಕರ ಮಾರಿಪಳ್ಳ (AITUC ಜಿಲ್ಲಾ ಉಪಾಧ್ಯಕ್ಷರು), ಯೋಗೀಶ್ ಜಪ್ಪಿನಮೊಗರು (CITU ಜಿಲ್ಲಾ ಖಜಾಂಚಿ) ಹಾಜರಿದ್ದರು.