ಹಾಸನ: ಹಾಸನದಲ್ಲಿ ಪುಡಿ ರೌಡಿಗಳು ನಡೆಸಿರುವ ಹಲ್ಲೆಯಲ್ಲಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ. ಪೊಲೀಸರು ಹಲ್ಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಂದಿನಿ ಪಾರ್ಲರ್ ನಡೆಸುತ್ತಿದ್ದ ಈ ಯುವಕನನ್ನು ರೌಡಿಗಳು ಹಣಕ್ಕಾಗಿ ಹಲವು ತಿಂಗಳಿಂದ ಪೀಡಿಸುತ್ತಿದ್ದರು ಎಂದು ಗೊತ್ತಾಗಿದೆ.
ನಿನ್ನೆ ಮುಂಜಾನೆ ಪುಡಿ ರೌಡಿಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಸತೀಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ನಂದಿನಿ ಪಾರ್ಲರ್ ನಡೆಸುತ್ತಿದ್ದ ಸತೀಶ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸತೀಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹಲ್ಲೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಸಮುದ್ರವಳ್ಳಿ ರಾಜು ಎಂಬಾತನನ್ನು ಬಂಧಿಸಲು ಹಾಸನ ತಾಲ್ಲೂಕಿನ ಕುಂತಿಬೆಟ್ಟಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಪೊಲೀಸರು ಗುಂಡು ಹಾರಿಸಿ ಆತನನ್ನು ಗಾಯಗೊಳಿಸಿ ಬಂದಿಸಿದ್ದು, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

