ಬೆಂಗಳೂರು: ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ. ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಸದ್ಯಕ್ಕೆ ಬೀದರ್ ಜಿಲ್ಲೆಯ ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಬಂದ ನಂತರ ಈ ಕುರಿತು ಇನ್ನಷ್ಟು ವಿವರವಾಗಿ ವಾಸ್ತವಾಂಶವನ್ನು ತಿಳಿಸುತ್ತೇನೆ. ಮತ್ತೊಮ್ಮೆ ಸ್ಪಷ್ಟೀಕರಣ ನೀಡುವುದೆಂದರೆ ನಮ್ಮ ರಾಜ್ಯದ ಶಾಲೆ-ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.