News Karnataka Kannada
Friday, May 10 2024
ಕರ್ನಾಟಕ

ರಾಜ್ಯಾದ್ಯಂತ ವ್ಯಾಪಕ ಮಳೆ ; ಜನ ಜೀವನ ಅಸ್ತವ್ಯಸ್ತ

Heavy Rain 15 7 21
Photo Credit :

ಬೆಂಗಳೂರು: ರಾಜ್ಯದ ಹಲವೆಡೆ ಬುಧವಾರ ಭಾರಿ ಮಳೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಕೊಡಗು ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಈ ವರ್ಷವೂ ಪ್ರವಾಹ ಭೀತಿ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಾರು ಬಿರುಸು ಪಡೆದುಕೊಂಡಿದೆ. ಲಿಂಗನಮಕ್ಕಿ ಜಲಾಶಯಕ್ಕೆ 33,331 ಕ್ಯುಸೆಕ್ ನೀರು ಹರಿದುಬಂದಿದ್ದು, ಜಲಾಶಯದ ನೀರಿನ ಮಟ್ಟ 1786.05 ಅಡಿಗಳಿಗೆ ತಲುಪಿದೆ. ಭದ್ರಾ ಜಲಾಶಯಕ್ಕೆ 7,646 ಕ್ಯುಸೆಕ್ ನೀರು ಹರಿದುಬಂದಿದ್ದು, ಜಲಾಶಯದ ನೀರಿನ ಮಟ್ಟ 157.4 ಅಡಿಗಳಿಗೆ ಹೆಚ್ಚಳವಾಗಿದೆ. ತುಂಗಾ ಜಲಾಶಯಕ್ಕೆ 11,456 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಾಣಿ ಜಲಾಶಯಕ್ಕೆ 4,095 ಕ್ಯುಸೆಕ್ ಒಳಹರಿವು ಇದೆ. ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯಕ್ಕೆ 22,111 ಕ್ಯುಸೆಕ್ ಒಳಹರಿವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಮೂರು ಕ್ರೆಸ್ಟ್‌ ಗೇಟ್‌ಗಳಿಂದ ಕಾಳಿ ನದಿಗೆ 10,050 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಗಾಗಿ 17,848 ಕ್ಯುಸೆಕ್ ಬಿಡಲಾಗುತ್ತಿದೆ. ಹಾರಂಗಿ ಜಲಾಶಯದ ಒಳಹರಿವು 12,282 ಕ್ಯುಸೆಕ್‌ಗೆ ಏರಿಕೆಯಾಗಿದೆ. ಭರ್ತಿಗೆ 7 ಅಡಿ ಬಾಕಿಯಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಬುಧವಾರ ತುಸು ಹೆಚ್ಚಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಮುಳುಗಡೆಯಾಗಿದೆ.
ಕುಮಾರಧಾರಾ ನದಿ ಸೇತುವೆ ಕೆಳಭಾಗದ ಕಿಂಡಿ ಅಣೆಕಟ್ಟೆ ಕೂಡ ಮುಳುಗಡೆಯಾಗಿದೆ. ಆದಿಸುಬ್ರಹ್ಮಣ್ಯ ಬಳಿಯ ದರ್ಪಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಸ್ನಾನಘಟ್ಟ ಮುಳುಗಡೆ ಆಗಿರುವುದರಿಂದ ಯಾತ್ರಾರ್ಥಿಗಳು ನದಿ ದಡದಲ್ಲಿ ತೀರ್ಥಸ್ನಾನ ಮಾಡಿದರು. ಸುಬ್ರಹ್ಮಣ್ಯ-ಬಿಸಿಲೆ-ಸಕಲೇಶಪುರ ಹೆದ್ದಾರಿಯಲ್ಲಿ ಬಿಸಿಲೆ ಸಮೀಪ ರಸ್ತೆಗೆ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿತ್ತು.
ಭಾಗಮಂಡಲ ತ್ರಿವೇಣಿ ಸಂಗಮವು ಜಲಾವೃತಗೊಂಡಿದೆ. ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನಮಟ್ಟ ಏರಿಕೆಯಾಗಿದ್ದು, ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ.
ಭಾಗಮಂಡಲ-ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಬಲಮುರಿಯ ಕಿರುಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್‌ ಆಗಿದೆ. ಮಡಿಕೇರಿ–ಮಂಗಳೂರು ರಸ್ತೆಯ ತಾಳತ್ತಮನೆ ಎಂಬಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, 6 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದೇ ಸ್ಥಳದಲ್ಲಿ 2018ರಲ್ಲೂ ಭೂಕುಸಿತವಾಗಿತ್ತು. ಅಲ್ಲಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು ಮಣ್ಣು ಸಡಿಲಗೊಂಡು ಮತ್ತೆ ಕುಸಿಯುಲು ಆರಂಭಿಸಿದೆ. ಮಡಿಕೇರಿ ಆಕಾಶವಾಣಿ ಟವರ್‌ ಬಳಿ ಗುಡ್ಡದ ಮಣ್ಣು ಕುಸಿದಿದೆ. ಟವರ್‌ನಿಂದ ಸ್ವಲ್ಪವೇ ದೂರದಲ್ಲಿ ಜನವಸತಿ ಪ್ರದೇಶವಿದ್ದು, ಆತಂಕ ಎದುರಾಗಿದೆ. ಬುಧವಾರ ವೃದ್ದನೊಬ್ಬ ಭಾಗಮಂಡಲದ ಕಿರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಬಿಸಿಲೆ ಸಮೀಪ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ಬಿಸಿಲೆ-ಸುಬ್ರಹ್ಮಣ್ಯ ಸಂಚಾರ ಕೆಲ ಕಾಲ ಬಂದ್‌ ಆಗಿತ್ತು. ಮೈಸೂರು ಜಿಲ್ಲೆಯಲ್ಲಿ ಬಹುತೇಕ ಕಡೆ ಜಿಟಿಜಿಟಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ, ಬಂಟ್ವಾಳ, ಪುತ್ತೂರು, ಮಂಗಳೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಸುಳ್ಯ ತಾಲ್ಲೂಕಿನಲ್ಲಿ ಗರಿಷ್ಠ 8 ಸೆಂ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಒಂದು ಮನೆಗೆ ಪೂರ್ಣ, 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಡುಪಿ ಜಿಲ್ಲೆಯ ನಿಟ್ಟೆ, ಗುಲ್ವಾಡಿ, ಕೆದೂರು, ಉಳ್ಳೂರು, ತಲ್ಲೂರು, ಶಿರೂರು, ಕಾರ್ಕಳ, ಹೊಸಾಳ, ಶಿವಳ್ಳಿ, ಉದ್ಯಾವರ, ಮೂಡನಿಡಂಬೂರು ಗ್ರಾಮದಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಭಾಗದಲ್ಲಿಮಳೆಯಿಂದಾಗಿ ಹಳ್ಳ, ಹೊಳೆಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹೊಸನಗರದಲ್ಲಿ 14.24 ಸೆಂ.ಮೀ ಮಳೆಯಾಗಿದ್ದು, ತೀರ್ಥಹಳ್ಳಿಯಲ್ಲಿ 79.68 ಮಿ.ಮೀ, ಸಾಗರದಲ್ಲಿ 70.80 ಮಿ.ಮೀ ಮಳೆ ದಾಖಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು