News Karnataka Kannada
Sunday, May 05 2024
ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ದ ಸುಳ್ಳು ಸುದ್ದಿ ಪ್ರಸಾರಿಸದಂತೆ ಟಿವಿ 5 ಚಾನೆಲ್‌ ಗೆ ನ್ಯಾಯಾಲಯ ಆದೇಶ

Tv5
Photo Credit :

ಆನೇಕಲ್‌ ; ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಯಾವುದೇ ಆಧಾರರಹಿತ ಸುದ್ದಿ ಪ್ರಸಾರ ಮಾಡದಂತೆ ಟಿವಿ 5 ಕನ್ನಡಕ್ಕೆ ಆನೇಕಲ್ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಸುದ್ದಿ ವಾಹಿನಿ ಟಿವಿ 5 ಮುಂದಿನ ಆದೇಶದವರೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಯಾವುದೇ ಚಾರಿತ್ರ್ಯವಧೆ ಅಥವಾ ಮಾನಹಾನಿಕರ ವರದಿಯನ್ನು ತಮ್ಮ ಸುದ್ದಿಸರಣಿಯಲ್ಲಿ ಅಥವಾ ʼಆರ್ ವೀ ಸ್ಟುಪಿಡ್ʼ ಕಾರ್ಯಕ್ರಮದಲ್ಲಿ ಪ್ರಸಾರ ಮಾಡದಂತೆ ಆನೇಕಲ್‌ ನ ನ್ಯಾಯಾಲಯವೊಂದು ಇತ್ತೀಚೆಗೆ ಮಧ್ಯಂತರ ಆದೇಶ ನೀಡಿದೆ.
ಕರೋನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಟಿವಿ 5 ಸುದ್ದಿವಾಹಿನಿಯ ವಿರುದ್ಧ ಬಿಜೆಪಿ ಕಾನೂನು ವಿಭಾಗದ ಸದಸ್ಯರಾದ ಆರ್. ಹರೀಶ್ ಕುಮಾರ್ ಅವರು ಆನೇಕಲ್ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ʼಟಿವಿ 5 ಕನ್ನಡʼ ಸುದ್ದಿಸಂಸ್ಥೆ, ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ಆರ್ .ಚೇತನ್ ಮತ್ತು ನಿರೂಪಕ ರಮಾಕಾಂತ್ ಆರ್ಯನ್ ವಿರುದ್ದ ಮೊಕದ್ದಮೆ ಹೂಡಿದ್ದರು.
“ಈ ಕುರಿತು ಕೋರ್ಟ್‌ ತಮ್ಮ ಅಬಿಪ್ರಾಯ ತಿಳಿಸಿದ್ದು, ʼಆರ್ ವಿ ಸ್ಟುಪಿಡ್ʼ ಹೆಸರಿನಲ್ಲಿ ಪ್ರಸಾರ ಮಾಡಲಾದ ಕಾರ್ಯಕ್ರಮ ಭಾರತದ ಪ್ರಧಾನಮಂತ್ರಿ ಅವರ ಇಮೇಜ್ ಅನ್ನು ಧಕ್ಕೆ ತರುತ್ತದೆ. ಪ್ರತಿವಾದಿ ಸಂಖ್ಯೆ 3 ರಮಾಕಾಂತ್ ಆರ್ಯನ್ ಅವರು ಬಳಸಿದ ಪದಗಳನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗೆ ಬಳಸಿಲ್ಲ ಎಂದು ತೋರುತ್ತದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಇದರರ್ಥ ಯಾವುದೇ ವ್ಯಕ್ತಿ ಆಧಾರರಹಿತವಾಗಿ ಇಲ್ಲವೇ ಬಲವಿಲ್ಲದೇ ಮಾನಹಾನಿ ಮಾಡಬಹುದು ಎಂದಲ್ಲ” ಎಂಬುದಾಗಿ ನ್ಯಾಯಾಧೀಶರಾದ ಎಂ ಎನ್ ರಾಮ್ ಪ್ರಶಾಂತ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಭಾರತದ ಪ್ರಧಾನಿ ಇಡೀ ದೇಶವನ್ನು ಪ್ರತಿನಿಧಿಸುತ್ತಾರೆ ಮತ್ತು ಆಧಾರವಿಲ್ಲದೆ ಅವರ ವಿರುದ್ಧ ಮಾಡಲಾಗುವ ಯಾವುದೇ ಹೇಳಿಕೆ ಖಂಡಿತವಾಗಿಯೂ ಅವರ ವರ್ಚಸ್ಸಿಗೆ ಧಕ್ಕೆ ತರುತ್ತದೆ. ಪ್ರತಿವಾದಿ ಸಂಖ್ಯೆ 1 (ʼಟಿವಿ 5 ಕನ್ನಡʼ) ಮಾಧ್ಯಮವು ಕೂಡ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದೆ. ಪ್ರತಿವಾದಿಗಳು ಆರೋಗ್ಯಕರ ಹೇಳಿಕೆಗಳನ್ನು ನೀಡಬಹುದು. ಆದರೆ ನೇರವಾಗಿ ಮತ್ತು ಪರೋಕ್ಷವಾಗಿ ಮಾನಹಾನಿಕರ ಪದಗಳನ್ನು ಉಪಯೋಗಿಸುವಂತಿಲ್ಲ. ಒಟ್ಟಾರೆಯಾಗಿ ಯಾವುದೇ ವ್ಯಕ್ತಿಯನ್ನು ದೂಷಿಸುವ ಹಕ್ಕು ಯಾವುದೇ ವ್ಯಕ್ತಿಗೆ ಇಲ್ಲ” ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.
ಅಲ್ಲದೆ ಇತ್ತೀಚೆಗೆ ವಾಹಿನಿಯ ಉದ್ಯೋಗ ತೊರೆದಿದ್ದ ನಿರೂಪಕಿ ಶ್ರೀಲಕ್ಷ್ಮೀ ಅವರ ಹೇಳಿಕೆಯನ್ನೂ ಆದೇಶ ಪ್ರತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರನ್ನು ನಿಂದಿಸಬೇಕಿತ್ತು ಎಂಬ ಶ್ರೀಲಕ್ಷ್ಮಿ ಅವರ ಹೇಳಿಕೆಯನ್ನು ಗಮನಿಸಿರುವ ನ್ಯಾಯಾಲಯ, “ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ವಿರುದ್ಧ ಮಾನಹಾನಿಕರ ಮತ್ತು ಸತ್ಯರಹಿತ ಸಂಗತಿಗಳನ್ನು ಪ್ರಸಾರ ಮಾಡುವುದು ಅವರ ಚಾರಿತ್ರ್ಯವಧೆ ಅಥಾವ ಮಾನಹಾನಿ ಮಾಡಿದಂತಾಗುತ್ತದೆ. ಪ್ರತಿವಾದಿಗಳನ್ನು ನ್ಯಾಯಾಲಯ ನಿರ್ಬಂಧಿಸದಿದ್ದರೆ ಖಂಡಿತವಾಗಿಯೂ ಮುಂದಿನ ಎಪಿಸೋಡ್ ಪ್ರಸಾರದಲ್ಲಿ ಹೆಚ್ಚು ಮಾನಹಾನಿ ಉಂಟಾಗಬಹುದು ಎಂದು ಕೊರ್ಟ್ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ವಾಹಿನಿಯ ಪ್ರತಿನಿಧಿಗಳು, ನಿರೂಪಕರು ಪ್ರಧಾನಮಂತ್ರಿ ಅವರ ವಿರುದ್ಧ ಮತ್ತು ಅವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮತ್ತು ಬಿಜೆಪಿ ವಿರುದ್ಧ, ಬರವಣಿಗೆ, ಪ್ರಕಟಣೆ, ಪ್ರಚಾರ, ಪ್ರಸಾರ ರೂಪದಲ್ಲಿ ಮಾನಹಾನಿಕರ ಮತ್ತು ಸತ್ಯಸತ್ಯತೆ ಇಲ್ಲದ ಹೇಳಿಕೆಗಳನ್ನು ತಮ್ಮ ಸುದ್ದಿ ಸರಣಿಯಲ್ಲಿ ಅಥವಾ ʼಆರ್ ವೀ ಸ್ಟುಪಿಡ್ ಕಾರ್ಯಕ್ರಮದಲ್ಲಿ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜೊತೆಗೆ ಫಿರ್ಯಾದಿಗಳು ಸಲ್ಲಿಸಬೇಕಾದ ದಾಖಲೆಗಳ ಕುರಿತಂತೆ ಕೆಲವು ಸೂಚನೆಗಳನ್ನು ನೀಡಿ ಪ್ರಕರಣವನ್ನು ಆಗಸ್ಟ್ 10ಕ್ಕೆ ಮುಂದೂಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು