News Karnataka Kannada
Sunday, May 12 2024
ಕರ್ನಾಟಕ

“ಕಾವೇರಿ ಕೂಗು” ಅಭಿಯಾನಕ್ಕೆ ಚಾಲನೆ

Photo Credit :

“ಕಾವೇರಿ ಕೂಗು” ಅಭಿಯಾನಕ್ಕೆ ಚಾಲನೆ

ಮಡಿಕೇರಿ: ಜಲಮೂಲಗಳ ಸಂರಕ್ಷಣೆಯೊಂದಿಗೆ ಉತ್ತಮ ಪರಿಸರ ನಿರ್ಮಾಣ ಮಾಡುವುದರಿಂದ ಪ್ರಾಕೃತಿಕ ಅನಾಹುತಗಳನ್ನು ತಪ್ಪಿಸಬಹುದು ಎಂದು ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟಿದ್ದಾರೆ.

ಅರಣ್ಯ ಕೃಷಿಗೆ ಸ್ಫೂರ್ತಿ ನೀಡುವ “ಕಾವೇರಿ ಕೂಗು” ಅಭಿಯಾನಕ್ಕೆ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಸದ್ಗುರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಳೆ ಪ್ರವಾಹದಿಂದ ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅಂತರ್ಜಲವನ್ನು ಸಂರಕ್ಷಿಸಿಕೊಳ್ಳುವ ಶಕ್ತಿಯ ಕೊರತೆ ಭೂಮಿಯಲ್ಲಿ ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಪ್ರವಾಹ ಅಥವಾ ಬರಗಾಲ ಸೃಷ್ಟಿಯಾಗಿ ಮಾನವ ಕುಲ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದೆ. ಗಿಡ ಮರಗಳನ್ನು ನೆಡುವ ಮೂಲಕ ಇಂತಹ ಅನಾಹುತಗಳನ್ನು ಶಾಶ್ವತವಾಗಿ ತಪ್ಪಿಸಬಹುದಾಗಿದೆ ಎಂದು ಸದ್ಗುರು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬಂದ ಪ್ರಾಕೃತಿಕ ವಿಕೋಪ ಮಾನವ ನಿರ್ಮಿತವಾಗಿದ್ದು, ಈ ಹಿನ್ನಲೆಯಲ್ಲಿ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.

“ಕಾವೇರಿ ಕೂಗು” ಅಭಿಯಾನ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‍ಹಾರ್ ವರೆಗೆ ಬೈಕ್ ರ್ಯಾಲಿ ಮೂಲಕ ಸಾಗಲಿದ್ದು, ಸಾರ್ವಜನಿಕರಿಗೆ ಹಾಗೂ ರೈತರಿಗೆ ಗಿಡ, ಮರ ಬೆಳೆಸುವ ಅರಿವು ಮೂಡಿಸಲಾಗುತ್ತಿದೆ ಎಂದು ಸದ್ಗುರು ಹೇಳಿದರು.

ಈ ಸಂದರ್ಭ ಹಾಜರಿದ್ದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾವೇರಿ ನದಿ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಸದ್ಗುರುಗಳು ಇದಕ್ಕೆ ಪೂರಕವಾಗಿ ಹಮ್ಮಿಕೊಂಡಿರುವ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಬಗ್ಗೆ ನೈಜ ಕಾಳಜಿ ಹೊಂದಿರುವ ಜನರಿದ್ದಾರೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಜನರ ಸಂಕಷ್ಟಗಳಿಗೆ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.

ಬೈಕ್ ಜಾಥದಲ್ಲಿ ಚಿತ್ರನಟರು
ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿ, ದಿಗಂತ್, ಬಿಗ್‍ಬಾಸ್ ವಿಜೇತ ಶಶಿ ಬೈಕ್ ಜಾಥಗೆ ಸಾಥ್ ನೀಡುವುದರೊಂದಿಗೆ ಒಟ್ಟು 25 ಜನರ ತಂಡ ತಲಕಾವೇರಿಯಿಂದ ಭಾಗಮಂಡಲ ಮೂಲಕ ಮಡಿಕೇರಿ ಕಡೆಗೆ ತೆರಳಿತು. ಸದ್ಗುರುಗಳು ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ತಮ್ಮ ತಂಡದೊಂದಿಗೆ ಬೈಕ್ ಜಾಥದಲ್ಲಿ ತೆರಳಿದರು. ಕ್ಷೇತ್ರದ ಅರ್ಚಕರಾದ ನಾರಾಯಣ ಆಚಾರ್, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಸ್ಥಳೀಯ ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸದ್ಗುರು ಜಗ್ಗಿ ವಾಸುದೇವ್ ಮತ್ತು ತಂಡವನ್ನು ಬರಮಾಡಿಕೊಂಡು ಅಭಿಯಾನಕ್ಕೆ ಶುಭ ಹಾರೈಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು