News Karnataka Kannada
Monday, April 29 2024
ದೇಶ

ಈ ವರ್ಷಾಂತ್ಯದಲ್ಲಿ ಓಲಾ ಸ್ಕೂಟರ್‌ ಬಿಡುಗಡೆ : 240 ಕಿಮಿ ಮೈಲೇಜ್‌ ನಿಂದ ಮಾರುಕಟ್ಟೆಯಲ್ಲಿ ಸಂಚಲನ ಸಾಧ್ಯತೆ

Ola Electric 23 7 21
Photo Credit :

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಹೊಸ ಸ್ಕೂಟರ್ ಉತ್ಪಾದನಾ ಮಾದರಿಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ರೋಡ್ ಟೆಸ್ಟಿಂಗ್ ನಡೆಸಿದೆ. ನಮ್ಮ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿ ವಾಹನ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಶೀಘ್ರದಲ್ಲೇ ಉತ್ಪಾದನಾ ಪ್ರಕ್ರಿಯೆ ಚಾಲನ ಪಡೆದುಕೊಳ್ಳಲಿದೆ. ಇದಕ್ಕೂ ಮುನ್ನ ಕಂಪನಿಯು ಟೆಸ್ಟ್ ರೈಡ್ ಮಾದರಿಯನ್ನು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಸ್ಕೂಟರ್ ಮೈಲೇಜ್ ವಿಚಾರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.
ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾದ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಓಲಾ ಹೊಸ ಸ್ಕೂಟರ್ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ. ಹೊಸ ಯೋಜನೆಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ವಾಹನಗಳನ್ನು ಸಹ ಅಭಿವೃದ್ದಿಪಡಿಸಲಿದೆ.
ಹೊಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಓಲಾ ಹೊಸ ಉತ್ಪಾದನಾ ಘಟಕವು ಬರೋಬ್ಬರಿ 500 ಎಕರೆ ವ್ಯಾಪ್ತಿಯಲ್ಲಿ ತಲೆಎತ್ತಿದ್ದು, ಹೊಸ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಾಣದ ಗುರಿ ಹೊಂದಲಾಗಿದೆ. ಏಷ್ಯಾದಲ್ಲಿಯೇ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಿರುವ ಓಲಾ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದಲ್ಲಿ ಪ್ರತಿ 2 ಸೆಕೆಂಡುಗಳಲ್ಲಿ 1 ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಳ್ಳಲಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ. ಓಲಾ ಕಂಪನಿಯು ಹೊಸ ಸ್ಕೂಟರ್ ಮಾದರಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೂ ರಫ್ತು ಮಾಡುವ ಬೃಹತ್ ಯೋಜನೆ ಹೊಂದಿದ್ದು, ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ.
ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಿವಿಧ ತಾಂತ್ರಿಕ ಕಾರ್ಯಗಳಿಗಾಗಿ ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲು ನಿರ್ಧರಿಸಲಾಗಿದ್ದು, ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿಸಿದೆ. ಈ ವರ್ಷಾಂತ್ಯಕ್ಕೆ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಓಲಾ ಕಂಪನಿಯು ದೇಶಾದ್ಯಂತ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಫಾಸ್ಟ್ ಚಾರ್ಜರ್‌ಗಳನ್ನು ಮತ್ತು ಆಯ್ದ ಮೆಟ್ರೊ ನಗರಗಳಲ್ಲಿ ಹೈಪರ್ ಚಾರ್ಜಿಂಗ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ.
ಉತ್ಪಾದನೆಯ ಹಂತದಲ್ಲಿರುವ ಓಲಾ ಹೊಸ ಸ್ಕೂಟರ್ ಶೀಘ್ರದಲ್ಲೇ ವಿವಿಧ ರಾಜ್ಯಗಳಲ್ಲಿ ನಿರ್ಮಾಣ ಹಂತದಲ್ಲಿರುವ ಅಧಿಕೃತ ಶೋರೂಂಗಳಲ್ಲಿ ಪ್ರದರ್ಶನಗೊಳ್ಳಲಿದ್ದು, ಮೊದಲ ಸ್ಕೂಟರ್ ಮಾದರಿಯನ್ನು ಕಂಪನಿಯು ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್)ಗೆ ಹಸ್ತಾಂತರಿಸುವ ಸಿದ್ದತೆಯಲ್ಲಿದೆ. ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯ ಚಾರ್ಜಿಂಗ್ ನಿಲ್ದಾಣ ನಿರ್ಮಾಣ ಗುರಿಹೊಂದಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್) ಸಂಸ್ಥೆಯು ಅತ್ಯತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುತ್ತಿದ್ದು, ಈ ಹಿನ್ನಲೆಯಲ್ಲಿ ಓಲಾ ಕಂಪನಿಯು ಮೊದಲ ಸ್ಕೂಟರ್ ಅನ್ನು ಸಿಇಎಸ್ಎಲ್ ಸಂಸ್ಥೆಗೆ ಹಸ್ತಾಂತರಿಸುವ ಆಶಯ ವ್ಯಕ್ತಪಡಿಸಿದೆ. ಹೊಸ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಮಾದರಿಗಳಿಗೆ ಬೆಲೆ ವಿಚಾರದಲ್ಲಿ ಮೈಲೇಜ್ ವಿಚಾರದಲ್ಲಿ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಪೆಟ್ರೋಲ್ ಬೆಲೆ ಹೆಚ್ಚಳದಿಂದಾಗಿ ಓಲಾ ಇವಿ ಸ್ಕೂಟರ್‌ಗೆ ಭರ್ಜರಿ ಬೇಡಿಕೆ ಹರಿದುಬರಲಿದೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು