ಕಲಬುರಗಿ: ಆಳಂದ ತಾಲ್ಲೂಕಿನ ಕಮಲಾನಗರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಳ್ಳದ ನೀರು ದನದ ಕೊಟ್ಟಿಗೆಗೆ ನುಗ್ಗಿ ಜೋಡೆತ್ತುಗಳು ಸ್ಥಳದಲ್ಲೇ ಮೃತಪಟ್ಟಿವೆ.ರೈತ ಕಲ್ಯಾಣಿ ಬಸವರಾಜ ಕೆರುಳ್ಳಿ ಅವರಿಗೆ ಸೇರಿ ಎರಡು ಎತ್ತುಗಳು ಮೃತಪಟ್ಟಿವೆ.ಕೃಷಿ ಪರಿಕರಗಳು ಕೊಚ್ಚಿಹೋಗಿದ್ದು, ಸುಮಾರು ₹1.50 ಲಕ್ಷ ಹಾನಿಯಾಗಿದೆ.
ಕಲ್ಯಾಣಿ ಅವರು ಮಂಗಳವಾರ ಸಂಜೆ ತಮ್ಮ ಜಮೀನಿನ ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟಿ ಮನೆಗೆ ಬಂದಿದ್ದರು. ರಾತ್ರಿಯಿಡಿ ರಭಸದಿಂದ ಮಳೆ ಸುರಿದಿದೆ. ಕಮಲಾನಗರ- ಬೆಡಜುರ್ಗಿ ಮಧ್ಯದ ಗಡಿಹಳ್ಳದಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ನೀರು ದನದ ಕೊಟ್ಟಿಗೆಗೆ ನುಗ್ಗಿದ್ದು, ದನಗಳನ್ನ ದಾವಣಿಗೆ ಕಟ್ಟಿದ್ದರಿಂದ ಪ್ರವಾಹ ಎದುರಿಸಲು ಆಗದೆ ಉಸಿರು ಗಟ್ಟಿ ಸ್ಥಳದಲ್ಲೇ ಮೃತಪಟ್ಟಿವೆ. ಸುಮಾರು ₹1 ಲಕ್ಷ ಮೌಲ್ಯದ ಎತ್ತು ಹಾಗೂ ₹50 ಸಾವಿರ ಮೌಲ್ಯದ ಪಂಪ್‌ಸೆಟ್, ಸ್ಪಿಂಕಲರ್ ಪೈಪ್ ಕೊಚ್ಚಿ ಹೋಗಿವೆ ಎಂದು ಕಲ್ಯಾಣಿ ತಿಳಿಸಿದರು.
ಪಶು ವೈದ್ಯಾಧಿಕಾರಿ ಬಸವರಾಜ ಸಪ್ಪಾಣಿ, ಕಂದಾಯ ನಿರೀಕ್ಷಕ ಮಲ್ಲಿನಾಥ ಮರಗುತ್ತಿ, ಗ್ರಾಮ ಲೆಕ್ಕಾಧಿಕಾರಿ ಸುನಿತಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

