ಅಫಜಲಪುರ: ತಾಲೂಕಿನ ಘತ್ತರಗಿ ಗ್ರಾಮದ ರೈತ ಚಂದ್ರಕಾಂತ ಮಲ್ಲೇಶಪ್ಪ ಬೇಲೂರ(55) ಸಾಲಬಾಧೆಯಿಂದ ಬೆಳಗಿನ ಜಾವ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಶವ ಎತ್ತಿಕೊಂಡು ಪಟ್ಟಣದ ತಹಶೀಲ್ದಾರ ಕಚೇರಿಯ ಮುಂದೆ ಮುಖ್ಯರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡ ಅವ್ವಣ್ಣ ಮ್ಯಾಕೇರಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಚಂದ್ರಕಾಂತ ಬೇಲೂರ ವಿವಿಧ ಬ್ಯಾಂಕುಗಳಲ್ಲಿ ಸುಮಾರು 13 ಲಕ್ಷ ಸಾಲ ಮಾಡಿದ್ದು,ಗ್ರಾಮಸ್ಥರಲ್ಲಿಯೂ ಸುಮಾರು 40 ಲಕ್ಷ ರೂಪಾಯಿ ಸಾಲ ಮಾಡಿರುತ್ತಾರೆ.ಮೃತ ರೈತನಿಗೆ 3 ಜನ ಗಂಡು ಮಕ್ಕಳ ಹಾಗೂ ಒಂದು ಹೆಣ್ಣು ಮಗು ಇದೆ. ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೂಡಲೇ ಸರಕಾರದಿಂದ ಸಾಲಮನ್ನಾ ಸೇರಿದಂತೆ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದರು.

ನಂತರ ಮಾತನಾಡಿದ ಶಾಸಕ ಎಮ್.ವೈ.ಪಾಟೀಲ ರೈತರ ಬದುಕು ಉತ್ತಮ ಪಡಿಸಲು ನಾವೆಲ್ಲರೂ ಕೂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ರೈತರ ಕೆಲವು ಗಂಭೀರ ಸಮಸ್ಯೆಗಳನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಪರಿಹಾರ ನೀಡಬೇಕು. ಈ ವರ್ಷ ಬೆಳೆ ವಿಮೆ 80 ಕೋಟಿ ಹಾಗೂ ಬೆಳೆ ಪರಿಹಾರ 13 ಕೋಟಿ ಬಂದಿದೆ. ಫಸಲಭೀಮಾ ಯೋಜನೆ ಮುಖಾಂತರ ಪರಿಹಾರ ದೊರೆಯಲಿದೆ. ರೈತರು ಜಾಗೃತರಾಗಿ ಇನ್ಸೂರೆನ್ಸ ಮಾಡಿಸಿಕೊಳ್ಳಬೇಕು.

ರೈತರ ಆತ್ಮಹತ್ಯೆ ನಿಲ್ಲಿಸಲು ಸರಕಾರದ ಗಮನಕ್ಕೆ ತರುತ್ತೆನೆ.ಒಮ್ಮೆ ಹೋದ ಜೀವಗಳು ಮತ್ತೆ ಬರುವುದಿಲ್ಲ.ಯಾವೊಬ್ಬ ರೈತರು ಪ್ರಾಣ ಕಳೆದುಕೊಳ್ಳಬಾರದು. ಧೈರ್ಯದಿಂದ ಎದುರಿಸುವ ಶಕ್ತಿ ರೈತರಲ್ಲಿ ಬರಬೇಕು.ಆತ್ಮಹತ್ಯೆ ಪರಿಹಾರವಲ್ಲ. ಮೃತ ರೈತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದರು.ರಾಜ್ಯ ಸರಕಾರದಿಂದ ಹೆಚ್ಚಿನ ಪರಿಹಾರ ದೊರಕಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೆನೆ.

ಕಾನೂನಿನ ಪ್ರಕಾರ ಸಿಗುವ ಸೌಲಭ್ಯ ಸಿಗುವಂತೆ ಮಾಡುತ್ತೆನೆ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚಿಸುತ್ತೆನೆ. ಮೃತ ರೈತನ ಕುಟುಂಬಕ್ಕೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವುದಲ್ಲದೇ, ವಿದ್ಯಾವಂತ ರೈತನ ಮಗನಿಗೆ ಹೊರಗುತ್ತಿಗೆ ಆಧಾರದ ಮೇಲೆ ಅತಿಥಿ ಶಿಕ್ಷಕರಾಗಿ ಕೆಲಸ ನೀಡುವುದಾಗಿ ಭರವಸೆ ನೀಡಿದರು. ಸರಕಾರದಿಂದ 5 ಲಕ್ಷ ರೂ.ಜೊತೆಗೆ ಮುಖ್ಯಮಂತ್ರಿಗಳ ನಿಧಿಯಿಂದ ಹೆಚ್ಚಿನ ಪರಿಹಾರ ಕೊಡಿಸುವ ಕೆಲಸ ಮಾಡುತ್ತೆನೆ ಎಂದರು.

ಮಾತು ಮುಂದುವರೆಸಿದ ಅವರು ತೊಗರಿ ಬೆಂಬಲ ಬೆಲ 7550 ಇದ್ದು, ರಾಜ್ಯ ಸರಕಾರ 450 ಬೆಂಬಲ ಬೆಲೆ ನೀಡುತ್ತಿದೆ.ಪ್ರತಿ ಕ್ವಿಂಟಲ್ ತೊಗರಿ ಬೆಲೆ 8500 ಕ್ಕೆ ಬೇಡಿಕೆ ನಮ್ಮ ಬೇಡಿಕೆ ಇದೆ.ಮುಂದಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಲು ಸರಕಾರಕ್ಕೆ ಮನವಿ ಮಾಡುವೆ ಎಂದರು.

ಇದೆ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಸಮದ್ ಪಟೇಲ, ತಹಶೀಲ್ದಾರರಾದ ಸಂಜುಕುಮಾರ ದಾಸರ,ತಾಲೂಕು ಕೃಷಿ ಅಧಿಕಾರಿ ಎಸ್.ಹೆಚ್.ಗಡಗಿಮನಿ, ರೈತ ಮುಖಂಡರಾದ ರಮೇಶ ಹೂಗಾರ, ಮಹಾಂತೇಶ ಜಮಾದಾರ,ರಾಜಕುಮಾರ ಬಡದಾಳ, ಭಿಮರಾವ್ ಗೌರ,ಮಹಾಂತೇಶ ಬಳೂಂಡಗಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮತೀನ್ ಪಟೇಲ,ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.