ಹೈದರಾಬಾದ್: ಮೊಬೈಲ್‌ಗೆ ರೀಚಾರ್ಜ್ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಕಿರಣ್ಮಯಿ (26) ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ಕುತ್ಬುಲ್ಲಾಪುರದ ಪ್ರಶಾಂತ್ ನಗರದ ನಿವಾಸಿಯಾಗಿದ್ದ ಈಕೆಗೆ 2015ರಲ್ಲಿ ಮದುವೆಯಾಗಿತ್ತು. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಆದರೆ ಪತಿಯೊಂದಿಗೆ ಹೊಂದಾಣಿಕೆಯಾಗದ ಕಾರಣ ಆತನಿಂದ ದೂರವಿದ್ದ ಕಿರಣ್ಮಯಿ, ಕಳೆದ ನಾಲ್ಕು ವರ್ಷಗಳ ಹಿಂದೆ ಬ್ಯೂಟಿಷಿಯನ್ ಕೋರ್ಸ್ ಮುಗಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಈ ನಡುವೆ ಆಕೆಗೆ ವೆಂಕಟೇಶ್ ಅಲಿಯಾಸ್ ಚಂದು ಎಂಬ ವ್ಯಕ್ತಿಯ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಕಳೆದ ಒಂದು ವರ್ಷದಿಂದ ಇವರಿಬ್ಬರೂ ಪ್ರಶಾಂತ್ ನಗರದ ಬಾಡಿಗೆ ಮನೆಯೊಂದರಲ್ಲಿ ‘ಲೀವ್ ಇನ್ ರಿಲೇಷನ್‌ಶಿಪ್’ ನಡೆಸುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ ಕಿರಣ್ಮಯಿ ಅವರ ಮೊಬೈಲ್ ಬ್ಯಾಲೆನ್ಸ್ ಮುಕ್ತಾಯವಾಗಿತ್ತು. ತನಗೆ ಸಂಬಳ ಬಾರದ ಕಾರಣ ತನ್ನ ಫೋನ್‌ಗೆ ರೀಚಾರ್ಜ್ ಮಾಡುವಂತೆ ಚಂದುವಿಗೆ ಕೇಳಿಕೊಂಡಿದ್ದರು. ಆದರೆ ಚಂದು ರೀಚಾರ್ಜ್ ಮಾಡಿಸಿರಲಿಲ್ಲ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಇದರಿಂದ ತೀವ್ರವಾಗಿ ಮನನೊಂದ ಕಿರಣ್ಮಯಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

