ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ 12 ಮತ್ತು 13 ರಂದು ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಗಡಿ ಸಂಬಂಧಗಳಲ್ಲಿ ಈ ಭೇಟಿ ಅತ್ಯಂತ ಪ್ರಮುಖ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಈ ಭೇಟಿಯ ವಿಶೇಷವೆಂದರೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುಮಾರು 400 ಅಧಿಕಾರಿಗಳು ಹಾಗೂ ರಾಜತಾಂತ್ರಿಕರ ಬೃಹತ್ ನಿಯೋಗ ಭಾರತಕ್ಕೆ ಆಗಮಿಸಲಿದೆ. ಕಳೆದ 2019ರ ಭೇಟಿಗೆ ಹೋಲಿಸಿದರೆ ಈ ಬಾರಿ ಇಮ್ಮಡಿಗೂ ಹೆಚ್ಚಿನ ಅಧಿಕಾರಿಗಳು ಬರಲಿದ್ದು, ಪ್ರವಾಸದ ಸನ್ನಾಹಕ್ಕಾಗಿ ಚೀನಾದ ಮುಂಚೂಣಿ ತಂಡವು ಈಗಾಗಲೇ ದೆಹಲಿಗೆ ತಲುಪಿ ಹೋಟೆಲ್ ಹಾಗೂ ಭದ್ರತಾ ಪರಿಶೀಲನೆ ನಡೆಸುತ್ತಿದೆ.

ಕಳೆದ 2020ರ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಉಂಟಾಗಿದ್ದ ಉದ್ವಿಗ್ನತೆಯ ನಂತರ, ಸುಮಾರು 7 ವರ್ಷಗಳ ಬಳಿಕ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 2019ರ ಮಹಾಬಲಿಪುರಂ ಶೃಂಗಸಭೆಯ ನಂತರ ಅವರು ಭಾರತಕ್ಕೆ ಬಂದಿರಲಿಲ್ಲ.

ಈ ಶೃಂಗಸಭೆಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷರ ನಡುವೆ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಒದಗಿಸಲಿದೆ. ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆ ಹಾಗೂ ಉಭಯ ದೇಶಗಳ ವ್ಯಾಪಾರ-ರಾಜತಾಂತ್ರಿಕ ಬಾಂಧವ್ಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಈ ಐತಿಹಾಸಿಕ ಭೇಟಿ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆಯಿದೆ.

2020 ರಿಂದ 2024 ರವರೆಗೆ ಗಡಿ ಪರಿಸ್ಥಿತಿಯಿಂದಾಗಿ ಸಂಬಂಧಗಳು ಕಠಿಣ ಹಂತದಲ್ಲಿದ್ದವು. ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳಲು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ಅತ್ಯಂತ ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.