ನವದೆಹಲಿ: ಚಲಿಸುವ ಎಸಿ ರೈಲು ಬೋಗಿಯೊಳಗೆ ವ್ಯಕ್ತಿಯೊಬ್ಬ ದೀಪ ಹಚ್ಚಿ, ಧೂಪದ ಕಡ್ಡಿ ಬೆಳಗಿ ಪೂಜೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

ರೈಲಿನಲ್ಲಿ ಬೆಂಕಿ ಮತ್ತು ಹೊಗೆಯಿಂದ ನೂರಾರು ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿರುವ ಈ ಬೇಜವಾಬ್ದಾರಿ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಗಂಭೀರ ದೃಶ್ಯಾವಳಿಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ರೈಲ್ವೆಯ ಟ್ವಿಟರ್ (X) ಸಹಾಯವಾಣಿ ‘ರೈಲ್ವೆ ಸೇವಾ’, ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಪ್ರತಿಕ್ರಿಯಿಸಿದೆ.

ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿರುವ ಈ ವಿಡಿಯೋದಲ್ಲಿ, ಬೋಗಿಯ ಮೇಲಿನ ಬರ್ತ್‌ನಲ್ಲಿ ಕುಳಿತಿರುವ ವ್ಯಕ್ತಿಯೊಬ್ಬ ತನ್ಮಯತೆಯಿಂದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದು ಕಂಡುಬಂದಿದೆ. ಆತ ಬೆಂಕಿ ಹಚ್ಚಿ ದೀಪ ಬೆಳಗುತ್ತಿದ್ದಂತೆ ಸಹಪ್ರಯಾಣಿಕರೊಬ್ಬರು ತಕ್ಷಣ ಆತನನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಲಿಸುವ ರೈಲಿನಲ್ಲಿ ಹೀಗೆ ಜ್ಯೋತಿ ಬೆಳಗುವುದು ಮತ್ತು ಧೂಪದ ಕಡ್ಡಿ ಹಚ್ಚುವುದರಿಂದ ಬೋಗಿಯಲ್ಲಿರುವ ಹೊಗೆ ಪತ್ತೆಹಚ್ಚುವ ತಂತ್ರಜ್ಞಾನ ಅಲಾರಾಂ ಸದ್ದು ಮಾಡಬಹುದು, ಅಷ್ಟೇ ಅಲ್ಲದೆ ಎಣ್ಣೆ ದೀಪದಿಂದ ಇಡೀ ಎಸಿ ಬೋಗಿಗೇ ಬೆಂಕಿ ಹೊತ್ತಿಕೊಳ್ಳುವ ದೊಡ್ಡ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಸಹಪ್ರಯಾಣಿಕರು ಎಷ್ಟೇ ವಿನಂತಿಸಿ ಬೆಂಕಿಯನ್ನು ನಂದಿಸುವಂತೆ ಹೇಳುತ್ತಿದ್ದರೂ, ಆ ವ್ಯಕ್ತಿ ಮಾತ್ರ ಪೂಜೆಯನ್ನು ಮುಂದುವರಿಸಿದ್ದಾನೆ.