ದುಬೈ: ಅನಿವಾಸಿ ಕನ್ನಡಿಗರ ರಕ್ಷಣೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಚುನಾವಣೆಯ ವೇಳೆ ಅನಿವಾಸಿ ಕನ್ನಡಿಗರಿಗಾಗಿ ಘೋಷಿಸಿದ್ದ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿಯನ್ನು ಯಾವಾಗ ಆರಂಭಿಸುತ್ತೀರಿ ಎಂದು ರಾಜ್ಯ ಸರಕಾರವನ್ನು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಪ್ರಶ್ನಿಸಿದ್ದಾರೆ.


ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ವಿಧಾನ ಪರಿಷತ್ ಗೆ ನೂತನ ಸದಸ್ಯೆಯಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಅವರಿಗಾಗಿ KNRI ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಹಾಗು ಕರ್ನಾಟಕ ಸಂಘ ದುಬೈನ ಅಧ್ಯಕ್ಷ ಶಶಿಧರ್ ನಾಗರಾಜಪ್ಪರವರ ನೇತೃತ್ವದಲ್ಲಿ ಯುಎಇಯ ಸುಮಾರು 36ಕ್ಕೂ ಹೆಚ್ಚು ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲಿನಲ್ಲಿ ಆಯೋಜಿಸಲಾಗಿದ್ದ ಅಭಿನಂದನೆ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊಲಾಸೊ ಮಾತನಾಡುತ್ತಿದ್ದರು.


ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಅನಿವಾಸಿಗಳಿಗೆ ಪ್ರತ್ಯೇಕ ಸಚಿವಾಲಯದ ʼಗ್ಯಾರಂಟಿʼಯನ್ನು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬಂದು ಕೆಲವು ವರ್ಷಗಳೇ ಆದರೂ ಈ ಗ್ಯಾರಂಟಿಯನ್ನು ಇನ್ನೂ ಈಡೇರಿಸುವಲ್ಲಿ ಯಾಕೆ ವಿಳಂಬ ? ಇನ್ನಾದರೂ ಈ ಬಗ್ಗೆ ಕ್ರಮಕೈಗೊಳ್ಳಿ ಎಂದರು.


ರಾಜ್ಯದಲ್ಲಿ ಈಗಾಗಲೇ ಆರತಿ ಕೃಷ್ಣ ನೇತೃತ್ವದ ಅನಿವಾಸಿ ಭಾರತೀಯ ವೇದಿಕೆ ಇದೆ, ಇದು ಸೀಮಿತ ಅಧಿಕಾರವನ್ನು ಹೊಂದಿದೆ. ಜೊತೆಗೆ ಖರ್ಚು ಮಾಡಲು ಬೇಕಾದಷ್ಟು ಬಜೆಟ್ ಕೂಡ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಕನ್ನಡಿಗರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದರು.



ಪ್ರಸಕ್ತ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸಲು, ಸಹಾಯಹಸ್ತವನ್ನು ನೀಡಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ. ಹಲವಾರು ವರ್ಷಗಳಿಂದ ಈ ಬಗ್ಗೆ ಒತ್ತಾಯ, ಒತ್ತಡವನ್ನು ಏರುತ್ತಿದ್ದರೂ ಇನ್ನೂ ಸಚಿವಾಲಯದ ಕನಸು ಈಡೇರಿಲ್ಲ. ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆಯ ಭರವಸೆ ಮಾತ್ರ ಸಿಗುತ್ತಿದೆ. ಇನ್ನು ನಾವು ಈ ಬಗ್ಗೆ ಸುಮ್ಮನೆ ಕೂರದೆ ಒಗ್ಗಟ್ಟಿನಿಂದ ಒತ್ತಾಯವನ್ನು ಮಾಡಬೇಕು.

