ಕೇರಳ: ವಯನಾಡು ಜಿಲ್ಲೆಯ 4 ಗ್ರಾಮಗಳು ಮಳೆ ಹಾಗೂ ರಣಭೀಕರ ಭೂಕುಸಿತಕ್ಕೆ ಕೊಚ್ಚಿ ಹೋಗಿವೆ. ದುರಂತದಲ್ಲಿ ಸಾವಿನ ಸಂಖ್ಯೆ 250ರ ಗಡಿ ದಾಟಿದೆ. 250ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದುವರೆಗೂ 90ಕ್ಕೂ ಹೆಚ್ಚು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಕೆಸರು ಮಿಶ್ರಿತ ನೀರಿನಲ್ಲಿ ಅಳಿದುಳಿದ ಅವಶೇಷಗಳ ಹುಡುಕಾಟ ಮುಂದುವರಿದಿದೆ. 132 ಸೇನಾ ಸಿಬ್ಬಂದಿ ಸೇರಿ ಎನ್​​ಡಿಆರ್​ಎಫ್​​, ಎಸ್​ಡಿಆರ್​​ಎಫ್ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ನಿರಂತರ ಹುಡುಕಾಟ ನಡೆಸಿದೆ. ನೂರಾರು ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಗುಡ್ಡ ಕುಸಿತದ ಭೀಕರತೆಯಲ್ಲಿ ಹಲವರ ಶವಗಳು 80 ಕಿಲೋ ಮೀಟರ್​ವರೆಗೂ ಕೊಚ್ಚಿ ಹೋಗಿವೆ. ಸೂಜಿಪಾರ್ ಅರಣ್ಯದ ಮೂಲಕ ನೆಲಂಬೂರಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಶವಗಳು ಪತ್ತೆ ಆಗಿದ್ದು, 21 ಆ್ಯಂಬುಲೆನ್ಸ್​​​​ನಲ್ಲಿ 41 ಶವಗಳನ್ನ ಮೆಪ್ಪಾಡಿಗೆ ರವಾನೆ ಮಾಡಲಾಗಿದೆ.