ಹೊಸದಿಲ್ಲಿ: ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ವಯನಾಡ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಭೂಕುಸಿತದ ಸಂತ್ರಸ್ತರನ್ನು ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲಿದ್ದಾರೆ. ವಯನಾಡ್‌ನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೇರಳದ ಕಣ್ಣೂರು ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಅವರು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ. ನಂತರ, ಮಧ್ಯಾಹ್ನ 12:15ರ ಸುಮಾರಿಗೆ ಭೂಕುಸಿತದಿಂದ ಸಂತ್ರಸ್ತವಾಗಿರುವ ಸ್ಥಳಗಳಿಗೆ ನೇರ ಭೇಟಿ ನೀಡಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸ್ಥಳಾಂತರ ಕಾರ್ಯಾಚರಣೆಗಳ ಕುರಿತು ರಕ್ಷಣಾ ತಂಡಗಳಿಂದ ವಿವರ ಪಡೆಯಲಿದ್ದಾರೆ. ಭೂಕುಸಿತದಿಂದ ಬದುಕುಳಿದವರು ಪ್ರಸ್ತುತ ಪುನರ್ವಸತಿ ಬಯಸುತ್ತಿರುವ ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ನಂತರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಲ್ಲಿನ ಪರಿಹಾರ ಪ್ರಯತ್ನಗಳ ಬಗ್ಗೆ ವಿವರವಾಗಿ ತಿಳಿಯಲಿದ್ದಾರೆ.