ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿಂದು ಮುಂಜಾನೆ ನಡೆದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಸಾವಿಗೀಡಾಗಿದ್ದಾರೆ. ಮತ್ತೋರ್ವ ವ್ಯಕ್ತಿಯನ್ನು ಮನೆಗೆ ನುಗ್ಗಿ ಮಲಗಿದ್ದಾಗಲೇ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಕೆಲವೆಡೆ ದುಷ್ಕರ್ಮಿಗಳು ಕೆಲ ಮನೆಗಳಿಗೆ ಬೆಂಕಿ ಹಚ್ಚಿದ ಮೇಲೆ ಹಿಂಸಾಚಾರ ಆರಂಭಗೊಂಡಿತ್ತು. ಆಗಸ್ಟ್ 1 ರಂದು ಪಕ್ಕದ ಅಸ್ಸಾಂನ ಕ್ಯಾಚಾರ್‍ನಲ್ಲಿ ಸಿಆರ್‍ಪಿಎಫ್ ಯೋಧರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಮೈತೇಯಿ ಮತ್ತು ಹ್ಮಾರ್ ಸಮುದಾಯಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಬಂದಿದ್ದರು. ಇದಾದ ಬಳಿಕ ಕೆಲವೆಡೆ ಹಿಂಸಾಚಾರ ಆರಂಭಗೊಂಡಿತ್ತು.