ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ಬಿಜೆಪಿ-ಏಕನಾಥ್‌ ಶಿಂಧೆ ಬಣದ ಶಿವಸೇನೆ ಹಾಗೂ ಮಿತ್ರಪಕ್ಷಗಳು 11 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ.

274 ಸದಸ್ಯರ ಬಲದ ವಿಧಾನಸಭೆಯಿಂದ ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಪರಿಷತ್‌ನ 11 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸ್ಪರ್ಧಿಸಿದ್ದ 9 ಸ್ಥಾನಗಳಲ್ಲಿ ಗೆಲುವು ಕಂಡಿದೆ.

103 ಶಾಸಕರನ್ನು ಹೊಂದಿರುವ ಬಿಜೆಪಿಯ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಪಂಕಜಾ ಮುಂಡೆ ಪ್ರಮುಖರಾಗಿದ್ದಾರೆ. ಜೊತೆಗೆ ಶಿವಸೇನೆ ಶಿಂಧೆ ಬಣ ಹಾಗೂ ಎನ್‌ಸಿಪಿ ಅಜಿತ್‌ ಪವಾರ್‌ ನೇತೃತ್ವದ ತಲಾ ಒಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಕಳೆದ ಲೋಕಸಭಾ ಚುನಾವಣೆಯ ಹಿನ್ನಡೆಯನ್ನು ಮೆಟ್ಟಿನಿಂತಿದ್ದಾರೆ. ಆದರೆ ಇಂಡಿಯಾ ಕೂಟದ ಕಾಂಗ್ರೆಸ್‌ ಒಂದು ಸ್ಥಾನ ಪಡೆದರೆ, ಯುಬಿಟಿ ಸಹ ಒಂದೇ ಒಂದು ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.