ನವದೆಹಲಿ: 2022 ರ ನಾಗರಿಕ ಸೇವಾ ಪರೀಕ್ಷೆಗೆ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ತಾತ್ಕಾಲಿಕ ಅಭ್ಯರ್ಥಿಯನ್ನು ಕೇಂದ್ರ ಲೋಕಸೇವಾ ಆಯೋಗ ರದ್ದುಗೊಳಿಸಿದೆ.

ಆಯೋಗದ ಕೂಲಂಕಷ ಪರಿಶೀಲನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಲಿ ಹುದ್ದೆಯಿಂದ ವಜಾ ಮಾಡಿರುವ ಮಾತ್ರವಲ್ಲದೆ, ಭವಿಷ್ಯದ ಎಲ್ಲಾ ಯುಪಿಎಸ್‌ಸಿ ಪರೀಕ್ಷೆಗಳು ಹಾಗೂ ಸೆಲೆಕ್ಷನ್‌ನಿಂದ ಶಾಶ್ವತವಾಗಿ ಆಕೆಯನ್ನು ಡಿಬಾರ್‌ ಮಾಡಿ ಆದೇಶ ಹೊರಡಿಸಿದೆ.

2022ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪೂಜಾ ಖೇಡ್ಕರ್‌ ಉತ್ತೀರ್ಣರಾಗಿದ್ದರು. ಆ ಬಳಿಕ ಐಎಎಸ್‌ ತರಬೇತಿ ಶಾಲೆಯಲ್ಲಿ ಕಡ್ಡಾಯ ತರಬೇತಿಯನ್ನು ಪೂರ್ಣ ಮಾಡಿ ಪ್ರೊಬೇಷನರಿ ಅಧಿಕಾರಿಯಾಗಿ ನಿಯುಕ್ತಿಯಾಗಿದ್ದರು. ಆದರೆ, ಪ್ರೊಬೇಷನರಿ ಅಧಿಕಾರಿಯಾದ ಬೆನ್ನಲ್ಲಿಯೇ ನನಗೆ ಇಂಥದ್ದೇ ಕಾರು ಬೇಕು, ನನಗೆ ಇದೇ ರೀತಿಯ ಸವಲತ್ತಯಗಳು ಬೇಕು ಎಂದಿದ್ದ ಕಾರಣಕ್ಕೆ ಪೂಜಾ ಖೇಡ್ಕರ್‌ ಸುದ್ದಿಯಾಗಿದ್ದರು. ಈ ವಿಚಾರ ಮಾಧ್ಯಮದಲ್ಲಿ ಸುದ್ದಿಯಾದ ಬಳಿಕ ಆಕೆಯ ದಾಖಲೆಯನ್ನು ಕೂಲಂಕಷವಾಗಿ ಪರೀಕ್ಷೆ ಮಾಡಲಾಗಿತ್ತು.

ಈ ಹಂತದಲ್ಲಿ ಆಕೆ ಸುಳ್ಳು ಒಬಿಸಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಿದ್ದು ಮಾತ್ರವಲ್ಲದೆ, ಅಂಗವೈಕಲ್ಯದ ಖೋಟಾದಲ್ಲಿ ಐಎಎಸ್‌ ಪರೀಕ್ಷೆ ಬರೆದಿದ್ದರು ಎನ್ನುವುದು ಗೊತ್ತಾಗಿತ್ತು. ಅಕ್ರಮ ದಾಖಲೆ ಸಲ್ಲಿಕೆ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿದ ಯುಪಿಎಸ್‌ಸಿ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಅಭ್ಯರ್ಥಿತನವನ್ನೇ ರದ್ದು ಮಾಡಿದೆ.