ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ ನಡೆಸಿದೆ. ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ – ರಷ್ಯಾ ಯುದ್ಧವನ್ನು ಕೊನೆಗೊಳಿಸಲು ಎರಡೂ ದೇಶಗಳು ರಾಜತಾಂತ್ರಿಕ ಮಾತುಕತೆ ನಡೆಸಬೇಕು ಎಂದು ಮೋದಿ ಆಗ್ರಹಿಸಿದ್ದಾರೆ.
‘ರಷ್ಯಾದ ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡು ಮಾಡಿರುವ ದಾಳಿ ಕಂಡು ಬೇಸರವಾಗಿದೆ. ಈಗ ನಡೆಯುತ್ತಿರುವ ಮಾತುಕತೆಗಳು ಹಗೆತನವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸ್ಥಾಪಿಸುವ ಕೆಲಸ ಮಾಡಬೇಕಿದೆ. ಆದರೆ, ಈ ಮಾತುಕತೆಗಳನ್ನು ನಿಲ್ಲಿಸಲು ಮಾಡುವ ಯಾವುದೇ ಪ್ರಯತ್ಬಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತೇವೆ.
ಫೆಬ್ರವರಿ 2022 ರಲ್ಲಿ ರಷ್ಯಾ- ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಮಾತುಕತೆ ನಡೆಸುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ. ಜೊತೆಗೆ ವ್ಲಾಡಿಮೀರ್ ಪುಟಿನ್ ಹಾಗೂ ಜೆಲೆನ್ಸ್ಕಿ ಜೊತೆ ಮಾತುಕತೆ ಕೂಡಾ ನಡೆಸಿದ್ದಾರೆ.
ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ನಡುವೆ ಇರುವ ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಆರೋಪಿಸಿದ್ದಾರೆ.
ನವ್ಗೊರೊಡ್ ಪ್ರದೇಶದಲ್ಲಿ ಪುಟಿನ್ ಅವರ ಅಧಿಕೃತ ನಿವಾಸದ ಮೇಲೆ ದಾಳಿಗೆ ಯತ್ನಿಸಿದ್ದ 91 ಡ್ರೋನ್‌ಗಳನ್ನು ಹೊಡೆದುರುಳಿಸಲಾಯಿತು. ಕೆಲ ಡ್ರೋನ್ಗಳು ದಾಳಿ ಮಾಡಿವೆ. ಆದರೂ ಯಾವುದೇ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ.
ಈ ದಾಳಿಯ ಪರಿಣಾಮವಾಗಿ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಕೊನೆಗೊಳಿಸಲು ನಡೆಯುತ್ತಿರುವ ಮಾತುಕತೆಗಳಲ್ಲಿ ರಷ್ಯಾ ಕೆಲ ಬದಲಾವಣೆಗಳನ್ನು ಮಾಡಲಿದೆ ಎಂದು ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿ ಸುಳ್ಳು ಎಂದಿದ್ದಾರೆ.
ಉಕ್ರೇನ್ ಮೇಲೆ ಹೊಸ ದಾಳಿಗಳನ್ನು ಮಾಡಲು ರಷ್ಯಾದ ಹೆಣೆದ ಹೊಸ ಸುಳ್ಳು ಎಂದು ಕರೆದಿದ್ದಾರೆ. ರಷ್ಯಾದ ಈ ಆರೋಪವು ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆಸಿದ ಮಾತುಕತೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಟೀಕೆ ಮಾಡಿದ್ದಾರೆ.
‘ರಷ್ಯಾ ಮತ್ತೆ ದಾಳಿಗೆ ಮುಂದಾಗಿದೆ, ಅಮೆರಿಕ ಅಧ್ಯಕ್ಷ ಟ್ರಂಪ್ ತಂಡದೊಂದಿಗೆ ನಮ್ಮ ತಂಡ ನಡೆಸುತ್ತಿರುವ ಮಾತುಕತೆಗಳನ್ನು ಅರ್ಧಕ್ಕೆ ನಿಲ್ಲಿಸಲು ಮಾಡುತ್ತಿರುವ ಷಡ್ಯಂತ್ರ ಇದು. ಶಾಂತಿಯನ್ನು ಕಾಪಾಡಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ಕಥೆಯು ಕೀವ್ ಸೇರಿದಂತೆ ಉಕ್ರೇನ್ ಮೇಲೆ ಮತ್ತಷ್ಟು ದಾಳಿಗಳನ್ನು ಮಾಡಲು ರಷ್ಯಾ ನಡೆಸುತ್ತಿರುವ ಷಡ್ಯಂತ್ರದ ಭಾಗ’ ಎಂದು ಝೆಲೆನ್ಸ್ಕಿ X ನಲ್ಲಿ ಬರೆದಿದ್ದಾರೆ.
ಅಮೆರಿಕದಲ್ಲಿ ಝೆಲೆನ್ಸ್ಕಿಯನ್ನು ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಪುಟಿನ್ ಜೊತೆ ಮಾತನಾಡಿದ ಟ್ರಂಪ್, ‘ಈ ದಾಳಿಯ ಬಗ್ಗೆ ತನಗೆ ತಿಳಿಸಲಾಗಿದೆ. ಈ ದಾಳಿಯಿಂದ ನನಗೆ ಬೇಸರವಾಗಿದೆ’ ಎಂದು ಹೇಳಿದ್ದಾರೆ.
‘ನನಗೆ ಈ ರೀತಿ ದಾಳಿ ಮಾಡುವುದು ಇಷ್ಟವಿಲ್ಲ. ಯುದ್ಧ ಒಳ್ಳೆಯದಲ್ಲ. ಈ ದಾಳಿ ಬಗ್ಗೆ ನಾನು ಅಧ್ಯಕ್ಷ ಪುಟಿನ್ರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಆಗ ನನಗೆ ತುಂಬಾ ಕೋಪ ಬಂದಿತ್ತು. ಇದು ಸೂಕ್ಷ್ಮವಾದ ಸಮಯ. ಇದು ದಾಳಿಗೆ ಸರಿಯಾದ ಸಮಯವಲ್ಲ. ಯುದ್ಧ ಮಾಡುವುದು ಬೇರೆ, ಆದರೆ, ಒಂದು ದೇಶದ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡುವುದು ಬೇರೆ’ ಎಂದು ಟ್ರಂಪ್ ಟೀಕಿಸಿದ್ದಾರೆ.

