ತಮಿಳುನಾಡು : 30 ಅಡಿ ಆಳದ ಬಾವಿಗೆ ಬಿದ್ದು ನರಳಾಡುತ್ತಿದ್ದ ಎರಡು ಕಾಡಾನೆಗಳನ್ನು ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ

ತಮಿಳುನಾಡಿನ ಕುಂಡಲಂ ಗ್ರಾಮದ ಬಳಿ ಆಹಾರ ಅರಸಿ ಬಂದಿದ್ದ ಕಾಡಾನೆಗಳ ಪೈಕಿ ಎರಡು ಕಾಡಾನೆಗಳು ಆಯತಪ್ಪಿ 30 ಅಡಿ ಆಳದ ಬಾವಿಗೆ ಬಿದ್ದಿದೆ. ರಾಜ್ಯದ ಕುಂಡಲಂ ಗ್ರಾಮದ ಬಳಿಯ ಜವಳಗೆರೆ ಕಾಡಿನಿಂದ ಆಹಾರ ಹುಡುಕುತ್ತಾ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ರೈತರ ಜಮೀನಿಗೆ ಬಂದಿದ್ದವು, ಆದರೆ ಸಂಜೆ ಆದರೂ ಕೂಡ ವಾಪಸ್ ಕಾಡಿನತ್ತ ಹೋಗದ ಹಿನ್ನಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸಹಾಯದಿಂದ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದಾರೆ. ಪಟಾಕಿ ಸದ್ದು ಕೇಳುತ್ತಿದ್ದಂತೆ ದಿಕ್ಕಾಪಾಲಾದ ಕಾಡಾನೆ ಹಿಂಡು ಓಡಿವೆ. ಈ ವೇಳೆ ಆಯಾತಪ್ಪಿ ಮರಿ ಆನೆ ಹಾಗೂ ಸಲಗ 30 ಅಡಿ ಆಳದ ಬಾವಿಗೆ ಬಿದ್ದಿವೆ.

ಬಳಿಕ ಎಲ್ಲಾ ಆನೆಗಳು ಕಾಡಿನತ್ತ ಓಡಿವೆ, ಆದರೆ ತಾಯಿ ಆನೆ ಮಾತ್ರ ಮರಿ ಆನೆಗಾಗಿ ಬಾವಿ ಬಳಿಯೇ ರೋಧಿಸುತ್ತಾ ನಿಂತ್ತಿತ್ತು. ತಾಯಿ ಕಾಡಾನೆಯ ಕೂಗಾಟ ಕೇಳಿದ ಅರಣ್ಯ ಸಿಬ್ಬಂದಿ ಬಾವಿಯ ಬಳಿ ಬಂದು ನೋಡಿದ್ದಾರೆ. ಈ ವೇಳೆ ಮರಿ ಆನೆ ಹಾಗೂ ಸಲಗ ಬಿದ್ದಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಎರಡು ಜೆಸಿಬಿ ಯ ಮೂಲಕ ರಾತ್ರಿಯಿಡೀ ಕಾರ್ಯಚರಣೆ ನಡೆಸಿದ್ದು, ಸತತ ಕಾರ್ಯಚರಣೆಯ ಪರಿಣಾಮ ಮರಿ ಆನೆ ಹಾಗೂ ಸಲಗ ಬಾವಿಯಿಂದ ಆಚೆ ವ್ಯವಸ್ಥೆ ಮಾಡಲಾಯಿತು. ಸದ್ಯ ಆನೆಗಳು ಕಾಡಿನತ್ತ ತೆರಳಿವೆ.