ಉತ್ತರಪ್ರದೇಶ: ಭಕ್ತರ ಸಂಖ್ಯೆ ಅಯೋಧ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೇಟಿ ನೀಡುವ ಭಕ್ತರು ಭಾರಿ ಪ್ರಮಾಣದ ಕಾಣಿಕೆ ಅರ್ಪಿಸುತ್ತಿದ್ದಾರೆ. ಚಿನ್ನ, ಬೆಳ್ಳಿ, ವಜ್ರ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳನ್ನೂ ಸಲ್ಲಿಸುತ್ತಾರೆ.

ಪ್ರತಿದಿನ ಲಕ್ಷಾಂತರ ರೂಪಾಯಿ ಹುಂಡಿಗೆ ಬೀಳುವುದು ಸೇರಿದಂತೆ ಬೆಲೆಬಾಳುವ ಆಭರಣಗಳನ್ನು ಅರ್ಪಿಸುತ್ತಿದ್ದಾರೆ. ಹೀಗಾಗಿ ಇವುಗಳ ನಿರ್ವಹಣೆಗೆಂದು ದೇವಸ್ಥಾನದ ಟ್ರಸ್ಟ್‌ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಕ ಮಾಡಿದೆ.

ಈ ಆರೆಸ್ಸೆಸ್ ಕಾರ್ಯಕರ್ತರು ಆಭರಣಗಳನ್ನು ದಾನ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತಿದೆ. ಮಾಹಿತಿ ದಾಖಲು ಮಾಡಲು ವಿವಿಧ ಪಾಳಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ.

ಪ್ರತಿ ದಿನದ ಸಂಜೆ ಕಾಣಿಕೆ ರೂಪದಲ್ಲಿ ಬಂದಿರುವ ಆಭರಣಗಳನ್ನು ದಾಖಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿ ಠೇವಣಿ ಇಡಲಾಗುತ್ತಿದೆ. ಕೆಲವು ಭಕ್ತರು ದೇಣಿಗೆ ಕೌಂಟರ್​ಗೆ ಹೋಗುವ ಬದಲು ಅಲ್ಲಿನ ಸಿಬ್ಬಂದಿ ಮೂಲಕ ಹಣ ನೀಡಲಾಗುತ್ತಿದೆ.

ಈ ವಹಿವಾಟುಗಳನ್ನೂ ಎಚ್ಚರಿಕೆಯಿಂದ ದಾಖಲು ಮಾಡಲು ಟ್ರಸ್ಟ್​ ಮುಂದಾಗಿದೆ. ಈ ಎಲ್ಲ ವಹಿವಾಟುಗಳ ಬಗ್ಗೆ ನಿಗಾ ಇಡಲು ಆರ್​ಎಸ್​ಎಸ್​ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಬಾಲ ರಾಮನಿಗೆ ಅಲಂಕಾರ ಮಾಡುವ ಆಭರಣಗಳನ್ನು ರಕ್ಷಿಸಲು ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಮಲಲ್ಲಾನನ್ನು ಅಲಂಕರಿಸುವಾಗ ಮತ್ತು ಅದನ್ನು ತೆಗೆಯುವ ವೇಳೆ ಪುರೋಹಿತರು ನಿವೃತ್ತ ಸೈನಿಕರ ಮೇಲ್ವಿಚಾರಣೆಯಲ್ಲಿ ಲಾಕರ್‌ನಿಂದ ಆಭರಣಗಳನ್ನು ಪಡೆದು ವಾಪಸ್​ ಕೊಡುತ್ತಾರೆ. ಎಲ್ಲ ಆಭರಣವನ್ನು ತೆಗೆಯುವಾಗ ಮತ್ತು ಹಾಕುವಾಗ ಲೆಕ್ಕ ಹಾಕಲಾಗುತ್ತದೆ.