ಮುಂಬೈ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಚರಿಸಲಾಗುವ ಮೊಸರು ಗಡಿಗೆ ಒಡೆಯುವ ಆಚರಣೆಯಲ್ಲಿ ಇಬ್ಬರು ಮೃತಪಟ್ಟು 117 ಜನರು ಗಾಯಗೊಂಡಿದ್ದಾರೆ.

ಮುಂಬೈ ಹಾಗೂ ಥಾಣೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು 117 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೊಸರು ಗಡಿಗೆ ಹೊಡೆಯುವ ಆಚರಣೆಯಲ್ಲಿ ಬಾಲಿವುಡ್ ನಟರಾದ ಗೋವಿಂದ, ಚಂಕಿ ಪಾಂಡೆ ಮತ್ತು ಸುನಿಲ್ ಶೆಟ್ಟಿ ಭಾಗವಹಿಸಿದ್ದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಸೇನೆ (ಯುಬಿಟಿ) ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್ಎಸ್) ಕೆಲ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಸಂಭ್ರಮದಲ್ಲಿ ಪಾಲ್ಗೊಂಡರು. ಹಾಗೇ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಎನ್‌ಸಿಪಿಯ ಅಜಿತ್‌ ಪವಾರ್‌ ಸೇರಿದಂತೆ ಹಲವಾರು ನಾಯಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.