ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ನ ಡಿಯೋಲಾಲಿಯಲ್ಲಿರುವ ಆರ್ಟಿಲರಿ ಶಾಲೆಯಲ್ಲಿ ಗುಂಡು ಹಾರಾಟದ ತಾಲೀಮಿನ ವೇಳೆ ಫಿರಂಗಿ ಶೆಲ್ ಸ್ಫೋಟಗೊಂಡು ಸಂಭವಿಸಿದ ಅವಘಡದಲ್ಲಿ ಇಬ್ಬರು ಭಾರತೀಯ ಸೇನಾ ಅಗ್ನಿವೀರ್‌ಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ(ಅ11) ತಿಳಿಸಿದ್ದಾರೆ.

ಅಗ್ನಿವೀರ್ಸ್ ಗಳಾದ ಗನ್ನರ್ ಗೋಹಿಲ್ ವಿಶ್ವರಾಜ್‌ಸಿಂಹ ಮತ್ತು ಗನ್ನರ್ ಸೈಕತ್ ಅವರು ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸೇನೆಯ ದಕ್ಷಿಣ ಕಮಾಂಡ್ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ತರಬೇತಿಗಾಗಿ ಅಗ್ನಿವೀರರು ಹೈದರಾಬಾದ್‌ನಿಂದ ಬಂದಿದ್ದರು.

ದುರಂತದ ಬಗ್ಗೆ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಎಲ್ಲಾ ಶ್ರೇಣಿಯ ಅಧಿಕಾರಿಗಳೊಂದಿಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ. ತೀವ್ರ ನಷ್ಟದ ಈ ಕ್ಷಣದಲ್ಲಿ ಅವರ ದುಃಖಿತ ಕುಟುಂಬಗಳಿಗೆ ನಾವು ನಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ’ ಎಂದು ಎಕ್ಸ್ ಪೋಸ್ಟ್ ಮಾಡಲಾಗಿದೆ. ನಿಖರವಾದ ಕಾರಣವನ್ನು ಕಂಡುಹಿಡಿಯಲು ಸೇನೆಯು ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.