ಚಾಮರಾನಗರ: ದೇವರನಾಡು ಕೇರಳದಲ್ಲಿ ಭಾರೀ ಭೂ ಕುಸಿತದಿಂದ ಸಾವು-ನೋವು ಸಂಖ್ಯೆ ಹೆಚ್ಚಾಗುತ್ತಿದೆ. ವಯನಾಡು ಜಿಲ್ಲೆಯ ಮೆಪ್ಪಾಡಿ, ಮುಂಡಕೈ, ಚೂರಲ್ಮಲ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 123ಕ್ಕೆ ಏರಿದೆ.
ಈ ಪೈಕಿ ಚಾಮರಾಜನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೆಪ್ಪಾಡಿಯಲ್ಲಿ ವಾಸವಿದ್ದ ಚಾಮರಾಜನಗರದ ಪುಟ್ಟ ಸಿದ್ದಿ(62) ಹಾಗೂ ರಾಣಿ ಎಂಬುವರ ತಾಯಿ ಸಾವನ್ನಪ್ಪಿದ್ದಾರೆ.
ಚಾಮರಾಜನಗರ ತಾಲೂಕು ಇರಸವಾಡಿ ಮೂಲದ ರಾಜನ್ ಹಾಗೂ ರಜನಿ ನಾಪತ್ತೆಯಾಗಿದ್ದಾರೆ. ಇವರು ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ವಾಸವಿದ್ದರು. ಆದರೆ, ಇದೀಗ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದು, ರಾಜನ್, ರಜನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಲ್ಲದೇ ಮುಂಡಕೈನ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ ಗುಂಡ್ಲುಪೇಟೆಯ ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭೂಕುಸಿತ ಸ್ಥಳದಲ್ಲಿ ಸುಮಾರು 98ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನು 128 ಜನರಿಗೆ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

