ಬಂಗಾರಪೇಟೆ: ತಾಲ್ಲೂಕಿನ ಐಮಾಸಪುರ ಗ್ರಾಮದಲ್ಲಿ ಶನಿವಾರ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗ್ರಾಮದ ಭವಾನಿಸಿಂಗ್ ಅವರ ಪತ್ನಿ ತುಳಸಿಬಾಯಿ (64) ಸರ ಕಳೆದುಕೊಂಡವರು.

ಸಂಜೆ 6:30ರ ಸುಮಾರಿಗೆ ತುಳಸಿಬಾಯಿ ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸರವನ್ನು ಜಗ್ಗಿದ್ದಾರೆ. ಸುಮಾರು 20 ಗ್ರಾಂ ತೂಕದ ಸರವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಅರ್ಧ ಸರ ಮಾತ್ರ ಅವರ ಕೈಗೆ ಸಿಕ್ಕಿದೆ. ಉಳಿದರ್ಧ ಸರ ತುಳಸಿಬಾಯಿ ಕತ್ತಿನಲ್ಲೇ ಉಳಿದುಕೊಂಡಿದೆ.

ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ ರವಿಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.